Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು!

ಬೆಳಗಾವಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು!

0
130

ಬೆಳಗಾವಿ: ಶಾಂತವಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು ಆತಂಕ ಮೂಡಿಸಿದೆ. ಪ್ರಭಾವಿ ವಕೀಲೆ ಪೂಜಾ ಕಾಕತಕರ ಅವರ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಕ್ರೈಂ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಿನ್ನೆ ರಾತ್ರಿ ಸುಮಾರು 1ರಿಂದ 2 ಗಂಟೆಯ ನಡುವೆ ಕಿಡಿಗೇಡಿಗಳು ವಕೀಲೆಯ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೂಜಾ ಕಾಕತಕರ ಅವರು ಕಳೆದ 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಹಲವು ಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದ ಮಂಡಿಸಿರುವ ಹಿನ್ನೆಲೆ ಹೊಂದಿದ್ದಾರೆ. ಇಂತಹ ವಕೀಲೆಯ ಮನೆಯನ್ನು ಗುರಿಯಾಗಿಸಿ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಓದುತ್ತಿದ್ದರೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮನೆಯ ಗ್ಲಾಸ್ ಮೇಲೆ ಗುಂಡು ತಗುಲಿದ ಗುರುತು ಪತ್ತೆಯಾಗಿದ್ದು, ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಎಫ್‌ಎಸ್‌ಎಲ್ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಗುಂಡು ತಗುಲಿರುವ ಗ್ಲಾಸ್ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ದಾಳಿಯ ಸ್ವರೂಪ ಸ್ಪಷ್ಟವಾಗಲಿದೆ.

ಈ ದಾಳಿ ವೈಯಕ್ತಿಕ ದ್ವೇಷದಿಂದ ನಡೆದಿದೆಯೇ? ವಕೀಲ ವೃತ್ತಿಗೆ ಸಂಬಂಧಿಸಿದ ಹಳೆಯ ಪ್ರಕರಣಗಳ ಹಿನ್ನೆಲೆಯಿದೆಯೇ? ಅಥವಾ ಬೆದರಿಕೆ ಹಾಕುವ ಉದ್ದೇಶದಿಂದ ನಡೆಸಿದ ಕೃತ್ಯವೇ? ಎಂಬ ಕೋನಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದೇ ವೇಳೆ ವಕೀಲೆ ಪೂಜಾ ಕಾಕತಕರ ಅವರಿಗೆ ಅಗತ್ಯ ರಕ್ಷಣೆ ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಮಧ್ಯರಾತ್ರಿ ನಡೆದ ಈ ಗುಂಡಿನ ದಾಳಿ ಬೆಳಗಾವಿ ಕಾನೂನು ವಲಯದಲ್ಲಿ ತೀವ್ರ ಆತಂಕ ಹುಟ್ಟಿಸಿದೆ.