SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಡಿ.ಕೆ. ಶಿವಕುಮಾರ್ ಚಾಣಕ್ಯ ಅಲ್ಲ, ಕುದುರೆ ವ್ಯಾಪಾರಿ

ಡಿ.ಕೆ. ಶಿವಕುಮಾರ್ ಚಾಣಕ್ಯ ಅಲ್ಲ, ಕುದುರೆ ವ್ಯಾಪಾರಿ

0
43

ಬೆಳಗಾವಿ: ಡಿ.ಕೆ. ಶಿವಕುಮಾರ್ ಚಾಣಕ್ಯ ಅಲ್ಲ. ಚಾಣಕ್ಯ ಎಂದಿಗೂ ಕುದುರೆ ವ್ಯಾಪಾರ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್ ಈಗ ಶಾಸಕರ ಖರೀದಿ ರಾಜಕಾರಣಕ್ಕೆ ಇಳಿದಿದ್ದು ಜನರೇ ಅದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷವೊಡ್ಡಿ ಶಾಸಕರನ್ನು ಅಡ್ಡಮತದಾನಕ್ಕೆ ಪ್ರೇರೇಪಿಸಿದೆ ಎಂದು ಆರೋಪಿಸಿದರು.

ಅಪರಾಧ ಪ್ರಕರಣ ಎದುರಿಸುತ್ತಿರುವ ಶಾಸಕರನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಸೆಳೆಯುವ ಪ್ರಯತ್ನ ಮಾಡಿದೆ. 2019ರಲ್ಲಿ ಆಪರೇಷನ್ ಕಮಲದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಕಾಂಗ್ರೆಸ್ ನಾಯಕರು, ಈಗ ಆಪರೇಷನ್ ಹಸ್ತ ನಡೆಸಿರುವುದಕ್ಕೆ ನಾಚಿಕೆಪಡಬೇಕು ಎಂದು ಕುಟುಕಿದರು.

ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿ ಪಕ್ಷಕ್ಕೆ ವಂಚಿಸಿರುವುದು ನಿಜ. ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಗುರುತಾದ ಬಳಿಕ ಅವರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವೇ ಸಿಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿನ ಬೆಳವಣಿಗೆಗಳ ಕುರಿತು ಪಕ್ಷದ ರಾಷ್ಟ್ರೀಯ ನಾಯಕರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ಸಮಯ ಕೇಳಿದ್ದು, ಸಮಯ ನಿಗದಿಯಾದ ಬಳಿಕ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ನಾಯಕರು ದೆಹಲಿಗೆ ತೆರಳಿ ಪರಿಸ್ಥಿತಿ ವಿವರಿಸಲಿದ್ದಾರೆ ಎಂದರು.

ಅಡ್ಡಮತದಾನ ಕುರಿತು ಆಣೆ ಪ್ರಮಾಣಕ್ಕೆ ಸಂಬಂಧಿಸಿದ ವಿಜಯೇಂದ್ರ ಹೇಳಿಕೆಯ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಶೋಕ ತಿಳಿಸಿದರು.