Home Advertisement
Home ನಮ್ಮ ಜಿಲ್ಲೆ ತುಮಕೂರು ಮುಂದಿನ ವರ್ಷಗಳಲ್ಲಿ ಉಳಿದ ಭರವಸೆಗಳ ಈಡೇರಿಕೆ: ಸಿಎಂ ಭರವಸೆ

ಮುಂದಿನ ವರ್ಷಗಳಲ್ಲಿ ಉಳಿದ ಭರವಸೆಗಳ ಈಡೇರಿಕೆ: ಸಿಎಂ ಭರವಸೆ

0
79

ತುಮಕೂರು: ಚುನಾವಣೆ ವೇಳೆ ಜಿ. ಪರಮೇಶ್ವರ್ ಅವತ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಬಳಿಕ, “ನವ ಕರ್ನಾಟಕ” ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ನಾಳೆಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಜಿ. ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ ಮತ್ತು ಕಂದಾಯ ಇಲಾಖೆಯ ಕ್ರಾಂತಿಕಾರಿ ಜನೋಪಯೋಗಿ ಕೆಲಸಗಳ ಜನಾರ್ಪಣೆ ಸಮಾವೇಶವನ್ನು ಸ್ವಯಂಸ್ಫೂರ್ತಿಯಿಂದ ತುಮಕೂರಿನಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಜಿ. ಪರಮೇಶ್ವರ್ ಅಧ್ಯಕ್ಷತೆಯ‌ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ‌ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಪ್ರಮುಖವಾಗಿ ನಾವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಒಂದೊಂದಾಗಿ ಈಡೇರಿಸಿದ್ದಲ್ಲದೆ ಉಳಿದ ಭರವಸೆಗಳನ್ನೂ ಈಡೇರಿಸಿ ನಾವು ನಿಮ್ಮ ಮುಂದೆ ಧನ್ಯತೆ ಅರ್ಪಿಸಲು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇವೆ ಎಂದರು.

ನಾವು ಅಧಿಕಾರಕ್ಕೆ ಬಂದ ಬಳಿಕ‌ ಸರ್ವ ಜಾತಿ, ಸರ್ವ ಧರ್ಮದ ಸಕಲ ಜನತೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರ ರೀತಿ ಜಾತಿ ಧರ್ಮದದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವ ಕೆಟ್ಟ ರಾಜಕಾರಣ ನಾವು ಮಾಡಲಿಲ್ಲ. ಬಿಜೆಪಿಯವರ ಎಲ್ಲಾ ಅಪಪ್ರಚಾರಗಳನ್ನು ಸುಳ್ಳಾಗಿಸಿ ನಾವು ಅಭಿವೃದ್ಧಿ ಮಾಡಿ ತೋರಿಸಿದ್ದೇವೆ ಎಂದರು.