SK Home Ad
Home ಕೃಷಿ/ವಾಣಿಜ್ಯ ಭಾರತೀಯ ಭಾಷೆಗಳಲ್ಲೇ ಮಾತನಾಡುವ ಎಐ ನಿರ್ಮಾಣಕ್ಕೆ ಜಿಯೋ ಸಜ್ಜು

ಭಾರತೀಯ ಭಾಷೆಗಳಲ್ಲೇ ಮಾತನಾಡುವ ಎಐ ನಿರ್ಮಾಣಕ್ಕೆ ಜಿಯೋ ಸಜ್ಜು

0
62

ಮುಂಬೈ: ಜಿಯೋ ಸಂಸ್ಥೆಯ ಮುಂದಿನ ದೊಡ್ಡ ಹೆಜ್ಜೆ ಅಥವಾ ಜಿಗಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ- ಕೃತಕ ಬುದ್ಧಿಮತ್ತೆ) ವಲಯದಲ್ಲಿ ಇರಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಕಂಪನಿಯ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ, ವಿದೇಶಗಳಲ್ಲಿ ತಯಾರಾಗುವ ಎಐಗೆ ಕೇವಲ ಗ್ರಾಹಕ ದೇಶವಾಗಿ ಭಾರತವು ಉಳಿಯಬಾರದು; ಬದಲಿಗೆ ಭಾರತವು ಎಐ ಸೃಷ್ಟಿಕರ್ತ ಮತ್ತು ಜಾಗತಿಕ ನಾಯಕ ಆಗಬೇಕು ಎಂದು ಹೇಳಿದರು.

ಇದೇ ಆಲೋಚನೆಯೊಂದಿಗೆ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಕಂಪನಿಯ ಹೊಸ ಬೆಳವಣಿಗೆಯ ಇಂಜಿನ್ ಆಗಿ ಮುನ್ನಡೆಸಲಾಗುತ್ತಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು. ಗ್ರಾಹಕರು, ಉದ್ಯಮಗಳು ಮತ್ತು ಸರ್ಕಾರಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಎಐ ಮೂಲಸೌಕರ್ಯ, ಪ್ಲಾಟ್‌ಫಾರ್ಮ್‌ಗಳು ಮತ್ತು ಸೇವೆಗಳ ಲಾಭದಾಯಕ ವ್ಯವಹಾರವನ್ನು ಸಿದ್ಧಪಡಿಸುವುದು ರಿಲಯನ್ಸ್ ಇಂಟೆಲಿಜೆನ್ಸ್‌ನ ಉದ್ದೇಶ ಎಂದು ಅವರು ಹೇಳಿದರು.

ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಅವರು ರಿಲಯನ್ಸ್ ಇಂಟೆಲಿಜೆನ್ಸ್‌ನ ಸೇವೆಗಳು ಮತ್ತು ಎಐ ಉತ್ಪನ್ನಗಳ ವಿವರವಾದ ಮಾಹಿತಿ ನೀಡಿದರು. ರಿಲಯನ್ಸ್ ಇಂಟೆಲಿಜೆನ್ಸ್ ಜಾಮ್ ನಗರದಲ್ಲಿ ಭಾರತದ ಸಾವರಿನ್ ಎಐ ಬೆನ್ನೆಲುಬನ್ನು (Sovereign AI Backbone) ನಿರ್ಮಿಸುತ್ತಿದೆ ಎಂದು ಅವರು ತಿಳಿಸಿದರು. ಈ ಮೂಲಸೌಕರ್ಯವು ರಿಲಯನ್ಸ್‌ನ ಸ್ವಂತ ಸೌರಶಕ್ತಿಯಿಂದ ಕಾರ್ಯ ನಿರ್ವಹಿಸಲಿದೆ. ಇದರ ಮೊದಲ 120 ಮೆಗಾವಾಟ್ ಸಾಮರ್ಥ್ಯವನ್ನು 2026ರ ಕೊನೆಯ ವೇಳೆಗೆ ಪ್ರಾರಂಭಿಸಲು ಯೋಜಿಸಲಾಗಿದೆ. ಇದು ಸಂಪೂರ್ಣವಾಗಿ ಕಾರ್ಯಗತಗೊಂಡಾಗ, ಈ ಸಾಮರ್ಥ್ಯವು ಎರಡು ಲಕ್ಷಕ್ಕೂ ಹೆಚ್ಚು H100-ಇಕ್ವಿವಲೆಂಟ್ ಜಿಪಿಯುಗಳವರೆಗೆ (GPU) ಹೆಚ್ಚಾಗಬಹುದು.

ಆಕಾಶ್ ಅಂಬಾನಿ ಮಾತನಾಡಿ, “ವಿಶ್ವದ ಎಐ ಪ್ಲಾಟ್‌ಫಾರ್ಮ್‌ಗಳು ಮೊದಲು ಇಂಗ್ಲಿಷ್‌ನಲ್ಲಿ ತಯಾರಾಗುತ್ತವೆ ಮತ್ತು ನಂತರ ಅವುಗಳನ್ನು ಭಾಷಾಂತರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಜಿಯೋ ಭಾರತೀಯ ಭಾಷೆಗಳಲ್ಲೇ ಸ್ಥಳೀಯ ಎಐ ಅನ್ನು ನಿರ್ಮಿಸುತ್ತಿದೆ. ಭಾರತದ ಎಐ ಭಾರತೀಯ ಭಾಷೆಯಲ್ಲೇ ಮಾತನಾಡಲಿದೆ, ಭಾರತದ ಹೃದಯಗಳನ್ನು ಜೋಡಿಸಲಿದೆ ಹಾಗೂ ಭಾರತದ ಚಿತ್ರಣ ಮತ್ತು ಹಣೆಬರಹವನ್ನು ಬದಲಾಯಿಸಲಿದೆ” ಎಂದು ಹೇಳಿದರು.

ರಿಲಯನ್ಸ್ ಇಂಟೆಲಿಜೆನ್ಸ್ 22 ಭಾರತೀಯ ಭಾಷೆಗಳಲ್ಲಿ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಬಹುಭಾಷಾ ಎಐ ಸೇವೆಗಳನ್ನು ನೀಡಲು ಸಿದ್ಧತೆ ನಡೆಸುತ್ತಿದೆ. ಇವುಗಳಲ್ಲಿ ಜಿಯೋಭಾರತ್‌ಐಕ್ಯೂ, ಎಐ ವ್ಯಾಪಾರ, ಜಿಯೋಹೆಲ್ತ್‌ಐಕ್ಯೂ, ಜಿಯೋಲರ್ನ್‌ಐಕ್ಯೂ ಮತ್ತು ಜಿಯೋಕೃಷಿಐಕ್ಯೂನಂತಹ ಸೇವೆಗಳು ಸೇರಿವೆ. ಈ ಸೇವೆಗಳ ಉದ್ದೇಶ ರೈತರು, ವಿದ್ಯಾರ್ಥಿಗಳು, ವರ್ತಕರು, ಕುಟುಂಬಗಳು ಮತ್ತು ಸಣ್ಣ ಉದ್ಯಮಿಗಳಿಗೆ ಎಐ ಉಪಯುಕ್ತತೆಯನ್ನು ತಲುಪಿಸುವುದಾಗಿದೆ.

ಜಿಯೋ ತನ್ನ ನೆಟ್‌ವರ್ಕ್‌ನಲ್ಲೂ ಎಐ ಅನ್ನು ನೇರವಾಗಿ ಜೋಡಿಸುತ್ತಿದೆ. ಕಂಪನಿಯು ‘ಜಿಯೋ ಕಾಲ್ ಏಜೆಂಟ್’ (Jio Call Agent) ಮೇಲೆ ಕೆಲಸ ಮಾಡುತ್ತಿದೆ. ಇದರ ಮೂಲಕ ಪ್ರತಿ ಜಿಯೋ ಕರೆಯಲ್ಲಿಯೂ ಗ್ರಾಹಕರ ಅನುಮತಿಯೊಂದಿಗೆ ಎಐ ಏಜೆಂಟ್ ಜೋಡಣೆಯಾಗಬಹುದು. ಇದು ಕರೆಯನ್ನು ಟ್ರಾನ್ಸ್‌ಕ್ರೈಬ್ (ಬರಹ ರೂಪಕ್ಕೆ ಪರಿವರ್ತಿಸುವುದು) ಮಾಡಬಲ್ಲದು, ಅದರ ಸಾರಾಂಶವನ್ನು ಸಿದ್ಧಪಡಿಸಬಲ್ಲದು ಮತ್ತು ಅಗತ್ಯವಿದ್ದಾಗ ಆಹಾರ ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಟೇಬಲ್ ಕಾಯ್ದಿರಿಸುವುದು ಅಥವಾ ಮೀಟಿಂಗ್ ನಿಗದಿಪಡಿಸುವ ಕೆಲಸಗಳನ್ನೂ ಮಾಡಬಹುದು.

ಆಕಾಶ್ ಅಂಬಾನಿ ಅವರು ಜಿಯೋದ ಐದನೇ ಬದ್ಧತೆಯನ್ನು ಭಾರತದ ತಂತ್ರಜ್ಞಾನವನ್ನು ಜಗತ್ತಿಗೆ ಕೊಂಡೊಯ್ಯುವುದರೊಂದಿಗೆ ಜೋಡಿಸಿದರು. 5ಜಿ, ಫಿಕ್ಸ್ಡ್ ವೈರ್‌ಲೆಸ್ ಆಕ್ಸೆಸ್ (FWA) ಮತ್ತು ಎಐ ಸೇವೆಗಳಿಗಾಗಿ ಜಿಯೋದಲ್ಲಿಯೇ ಸಿದ್ಧಪಡಿಸಲಾದ ಸ್ವಂತ ಡೀಪ್-ಟೆಕ್ ಸ್ಟ್ಯಾಕ್ (Deep-tech stack) ಈಗ ಆಯ್ದ ದೇಶಗಳಲ್ಲಿ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಬಳಕೆಗೆ ಸಿದ್ಧವಾಗಿದೆ ಎಂದರು.

ರಿಲಯನ್ಸ್ ಸಂಸ್ಥೆಯು ಗೂಗಲ್, ಮೆಟಾ ಮತ್ತು ಎನ್‌ವಿಡಿಯಾ (Nvidia) ಜೊತೆಗಿನ ಪಾಲುದಾರಿಕೆಯನ್ನು ಸಹ ಉಲ್ಲೇಖಿಸಿದೆ. ಈ ಪಾಲುದಾರಿಕೆಗಳ ಮೂಲಕ ಜಾಗತಿಕ ತಂತ್ರಜ್ಞಾನವನ್ನು ಭಾರತೀಯ ಅನುಷ್ಠಾನ, ಭಾರತೀಯ ಮೂಲಸೌಕರ್ಯ ಮತ್ತು ಭಾರತ-ಪ್ರಥಮ ಆಡಳಿತದೊಂದಿಗೆ (India-first governance) ಜೋಡಿಸಲಾಗುವುದು ಎಂದು ಕಂಪನಿ ಹೇಳಿದೆ.

ಜಿಯೋ ಹೇಗೆ ಪ್ರತಿ ಭಾರತೀಯನಿಗೆ ಡೇಟಾವನ್ನು ಕೈಗೆಟುಕುವಂತೆ ಮಾಡಿತ್ತೋ ಅದೇ ರೀತಿ ರಿಲಯನ್ಸ್ ಇಂಟೆಲಿಜೆನ್ಸ್ ಈಗ ಎಐ ಅನ್ನು ಸುಲಭ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ. ಎಐ ಎಲ್ಲರಿಗೂ ಸುಲಭವಾಗಿ ಲಭ್ಯವಾದಾಗ, ಭಾರತವು ಕೇವಲ ಎಐ ಯುಗದ ಭಾಗೀದಾರನಾಗಿ ಉಳಿಯದೆ, ಅದರ ನೇತೃತ್ವವನ್ನು ವಹಿಸಲಿದೆ ಎಂದು ಕಂಪನಿ ಪ್ರತಿಪಾದಿಸಿದೆ.