NEET-UG ಮರುಪರೀಕ್ಷೆಗೂ ಮುನ್ನ ಟೆಲಿಗ್ರಾಮ್‌ಗೆ ಬ್ರೇಕ್; ಕೇಂದ್ರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಮನ್ನಣೆ
ನವದೆಹಲಿ: ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಭವಿಷ್ಯಕ್ಕೆ ಸಂಬಂಧಿಸಿದಿರುವ NEET-UG 2026 ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಮಾಹಿತಿಯ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಜೂನ್ 22 ರವರೆಗೆ ದೇಶದಲ್ಲಿ ಜನಪ್ರಿಯ ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಟೆಲಿಗ್ರಾಮ್ ಸಂಸ್ಥೆ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ಪರೀಕ್ಷಾ ಭದ್ರತೆಗೆ ಆದ್ಯತೆ ನೀಡಿದ ಹೈಕೋರ್ಟ್ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ
ಪರೀಕ್ಷಾ ಭದ್ರತೆ ಪ್ರಮುಖ – ಹೈಕೋರ್ಟ್: ವಿಚಾರಣೆ ವೇಳೆ ಕೇಂದ್ರ ಸರ್ಕಾರ, ಕಳೆದ ಕೆಲವು ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಿತು.
ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಪರೀಕ್ಷೆ ನಡೆಯುವ ಅವಧಿಯಲ್ಲಿ ಯಾವುದೇ ರೀತಿಯ ಪ್ರಶ್ನೆಪತ್ರಿಕೆ, ಉತ್ತರ ಕೀ ಅಥವಾ ಪರೀಕ್ಷಾ ಸಾಮಗ್ರಿಗಳ ಅನಧಿಕೃತ ಪ್ರಸಾರವನ್ನು ತಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿತು. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮ ಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ರಾಹುಲ್‌ಗೆ ಮೋದಿ ಶುಭಾಶಯ: ಜಾಲತಾಣದಲ್ಲಿ ಪೋಸ್ಟ್ ವೈರಲ್!
ಜೂನ್ 22ರವರೆಗೆ ನಿರ್ಬಂಧ ಮುಂದುವರಿಕೆ : ಜೂನ್ 21 ರಂದು ನಡೆಯಲಿರುವ NEET-UG ಮರುಪರೀಕ್ಷೆ ಪೂರ್ಣಗೊಳ್ಳುವವರೆಗೆ, ಅಂದರೆ ಜೂನ್ 22ರವರೆಗೆ ಟೆಲಿಗ್ರಾಮ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಈ ಅವಧಿಯಲ್ಲಿ ಯಾವುದೇ ಪರೀಕ್ಷಾ ಸಂಬಂಧಿತ ವಿಷಯಗಳು ಸೋರಿಕೆಯಾಗದಂತೆ ನೋಡಿಕೊಳ್ಳುವುದು ಹಾಗೂ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಕಳೆದ ವರ್ಷ NEET ಪರೀಕ್ಷಾ ಅಕ್ರಮಗಳ ಕುರಿತು ದೇಶವ್ಯಾಪಿ ವಿವಾದ ಸೃಷ್ಟಿಯಾಗಿದ್ದ ಹಿನ್ನೆಲೆ, ಈ ಬಾರಿ ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಅಭ್ಯರ್ಥಿಗಳಿಗೆ WhatsApp ಮೂಲಕ NTA ಮಾಹಿತಿ : ಇದೇ ವೇಳೆ, National Testing Agency ಅಭ್ಯರ್ಥಿಗಳಿಗೆ ಅಧಿಕೃತ ಮಾಹಿತಿಯನ್ನು ತಲುಪಿಸಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ. NTA ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಪ್ರಕಟಣೆ ಹೊರಡಿಸಿ, NEET-UG 2026 ಮರುಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ WhatsApp ಚಾನೆಲ್ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದೆ.
ಅಧಿಕೃತ ಖಾತೆಯ ಗುರುತಿಗಾಗಿ ಪರಿಶೀಲಿತ (Verified) ಚಿಹ್ನೆ ಮತ್ತು “National Testing Agency” ಹೆಸರನ್ನು ಗಮನಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ವಂಚಕರ ಬಗ್ಗೆ ಎಚ್ಚರಿಕೆ : NTA ಅಭ್ಯರ್ಥಿಗಳಿಗೆ ಮಹತ್ವದ ಎಚ್ಚರಿಕೆಯನ್ನೂ ನೀಡಿದೆ. ಯಾವುದೇ OTP, ವೈಯಕ್ತಿಕ ಮಾಹಿತಿ ಅಥವಾ ಹಣ ಪಾವತಿಸಲು NTA ಎಂದಿಗೂ ಕೇಳುವುದಿಲ್ಲ. ಪ್ರಶ್ನೆಪತ್ರಿಕೆ, ಉತ್ತರ ಕೀ ಅಥವಾ “ಲೀಕ್ ಆದ” ವಸ್ತುಗಳನ್ನು ಸಂಸ್ಥೆ ಕಳುಹಿಸುವುದಿಲ್ಲ.
ನೀಲಿ ಪರಿಶೀಲನಾ ಚಿಹ್ನೆ ಇಲ್ಲದ ಖಾತೆಗಳನ್ನು ನಂಬಬಾರದು. ಅನುಮಾನಾಸ್ಪದ ಸಂದೇಶಗಳು ಕಂಡುಬಂದರೆ ಸೈಬರ್ ಕ್ರೈಂ ಪೋರ್ಟಲ್ ಅಥವಾ ಸಹಾಯವಾಣಿ ಮೂಲಕ ದೂರು ನೀಡಬೇಕು ಎಂದು ತಿಳಿಸಿದೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ: NEET-UG ದೇಶದ ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಸರ್ಕಾರ ಹಾಗೂ ಪರೀಕ್ಷಾ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳು ಮಹತ್ವ ಪಡೆದಿವೆ. ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೂ ಇದೀಗ ನ್ಯಾಯಾಂಗದ ಬೆಂಬಲ ದೊರೆತಿರುವುದರಿಂದ, ಪರೀಕ್ಷೆಯನ್ನು ಯಾವುದೇ ಅಡಚಣೆಯಿಲ್ಲದೆ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.




















