ಅಹಮದಾಬಾದ್: ಐಪಿಎಲ್ ಪೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್‌ನಲ್ಲಿ ಗೆಲುವು ಸಾಧಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಲೀಗ್ ಹಂತದಲ್ಲಿ ತಲಾ 18 ಅಂಕಗಳನ್ನು ಗಳಿಸಿ ನೆಟ್ ರನ್‌ರೇಟ್ ಆಧಾರದಲ್ಲಿ ಮೊದಲ ಎರಡು ಸ್ಥಾನ ಪಡೆದಿದ್ದ ಈ ಉಭಯ ತಂಡಗಳ ನಡುವಿನ ಈ ಪಂದ್ಯ ರೋಚಕತೆಯ ಪರಾಕಾಷ್ಠೆ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.
ಕ್ವಾಲಿಫೈಯರ್ 1 ಪಂದ್ಯದಲ್ಲಿ ಧರ್ಮಶಾಲಾದಲ್ಲಿ ಗುಜರಾತ್ ವಿರುದ್ಧವೇ 92 ರನ್‌ಗಳ ಬೃಹತ್ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ರಜತ್ ಪಾಟಿದಾರ್ ಅವರ ಅಬ್ಬರದ ಅಜೇಯ 93 (33 ಎಸೆತ) ರನ್‌ಗಳ ನೆರವಿನಿಂದ ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ (254/5) ಕಲೆಹಾಕಿದ್ದ ಆರ್‌ಸಿಬಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಮೋಘ ಲಯದಲ್ಲಿದೆ.
ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್ ಮತ್ತು ಕೃನಾಲ್ ಪಾಂಡ್ಯ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಹಾಗೂ ಭುವನೇಶ್ವರ್ ಕುಮಾರ್, ಜೇಕಬ್ ಡಫಿ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ವೇಗದ ಬೌಲಿಂಗ್ ಪಡೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದೆ.
ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತರೂ, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.
ಶುಭಮನ್ ಗಿಲ್ ಅವರ ಆಕರ್ಷಕ ಬ್ಯಾಟಿಂಗ್, ಜೋಸ್ ಬಟ್ಲರ್ ಅವರ ಸ್ಫೋಟಕ ಆಟ ಮತ್ತು ರಾಹುಲ್ ತೇವಾಟಿಯಾ ಅವರ ಫಿನಿಶಿಂಗ್ ಸಾಮರ್ಥ್ಯ ತಂಡದ ಪ್ರಮುಖ ಬಲವಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ಅವರಂತಹ ವಿಶ್ವದರ್ಜೆಯ ಆಟಗಾರರು ಆರ್‌ಸಿಬಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ.






















