SK Home Ad
Home ಕ್ರೀಡೆ ಮಹಾರಾಜ ಟ್ರೋಫಿ: ಜೂ. 1ಕ್ಕೆ ಮೈಸೂರು ವಾರಿಯರ್ಸ್ ಪ್ರತಿಭಾ ಅನ್ವೇಷಣೆ

ಮಹಾರಾಜ ಟ್ರೋಫಿ: ಜೂ. 1ಕ್ಕೆ ಮೈಸೂರು ವಾರಿಯರ್ಸ್ ಪ್ರತಿಭಾ ಅನ್ವೇಷಣೆ

0
69

ಬೆಂಗಳೂರು: ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಗಾಗಿ ಕರ್ನಾಟಕದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಲು `ಮೈಸೂರು ವಾರಿಯರ್ಸ್’ ತಂಡವು ಜೂನ್ 1ರಂದು ಬೆಂಗಳೂರಿನಲ್ಲಿ ಒಂದು ದಿನದ ಮುಕ್ತ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಿದೆ.

ರಾಜನಕುಂಟೆಯಲ್ಲಿರುವ `ಜಸ್ಟ್ ಕ್ರಿಕೆಟ್ ಅಕಾಡೆಮಿ’ಯಲ್ಲಿ ಈ ಪ್ರತಿಭಾ ಅನ್ವೇಷಣೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದಲೇ ಟ್ರಯಲ್ಸ್ ಆರಂಭವಾಗಲಿದೆ. ಕೆಎಸ್‌ಸಿಎ ನೋಂದಾಯಿತ ಕ್ಲಬ್ ಆಟಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆಯ್ಕೆಗೆ ಬರುವ ಆಟಗಾರರು ಕಡ್ಡಾಯವಾಗಿ ಕಳೆದ ಎರಡು ವರ್ಷಗಳ ತಮ್ಮ ಕೆಎಸ್‌ಸಿಎ ಪಂದ್ಯಗಳ ಅಂಕಿ-ಅಂಶಗಳ ದಾಖಲೆ ಮತ್ತು ಸ್ವಂತ ಕ್ರಿಕೆಟ್ ಕಿಟ್ ಅನ್ನು ತರಬೇಕಿರುತ್ತದೆ. ಆಟಗಾರರಿಗೆ ಅಗತ್ಯವಿರುವ ಕ್ರಿಕೆಟ್ ಬಾಲ್‌ಗಳನ್ನು ಕ್ರೀಡಾಂಗಣದಲ್ಲೇ ಒದಗಿಸಲಾಗುವುದು ಎಂದು ತಿಳಿಸಿದೆ.

ಈ ಟ್ರಯಲ್ಸ್‌ನಲ್ಲಿ ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆರ್.ಎಕ್ಸ್. ಮುರಳಿಧರ್, ಸಹಾಯಕ ಕೋಚ್ ವಿಜಯ್ ಮದ್ಯಾಲ್ಕರ್, ಮ್ಯಾನೇಜರ್ ಸುರೇಶ್ ಎಂ.ಆರ್. ಸೇರಿದಂತೆ ಕೋಚಿಂಗ್ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಶಾರ್ಟ್ಲಿಸ್ಟ್ ಆಗುವ ಅತ್ಯುತ್ತಮ ಆಟಗಾರರನ್ನು ಮೈಸೂರು ವಾರಿಯರ್ಸ್ ಕೋಚಿಂಗ್ ತಂಡವು ಮಹಾರಾಜ ಟ್ರೋಫಿ ಟಿ20 ಹರಾಜು ಪಟ್ಟಿಗೆ ಸೇರಿಸಲು ಕೆಎಸ್‌ಸಿಎಗೆ ಶಿಫಾರಸು ಮಾಡಲಿದೆ.

ಈ ಕುರಿತು ಮಾತನಾಡಿರುವ ಮೈಸೂರು ವಾರಿಯರ್ಸ್ ತಂಡದ ಮಾಲೀಕರು ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಅವರು, “ನಮ್ಮ ಎನ್‌ಆರ್ ಗ್ರೂಪ್ ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಪ್ರತಿಭಾ ಅನ್ವೇಷಣೆಯ ಮೂಲಕ ರಾಜ್ಯದ ಭರವಸೆಯ ಕ್ರಿಕೆಟಿಗರನ್ನು ಗುರುತಿಸಿ, ಅವರಿಗೆ ಕ್ರಿಕೆಟ್ ಜೀವನದಲ್ಲಿ ಮುಂದೆ ಬರಲು ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.