ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯ್ಕ್ ಅವರಿಂದ 300 ಪುಟಗಳ ವರದಿ ಸ್ವೀಕರಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುತೂಹಲ ಮೂಡಿಸಿರುವ ನಡುವೆಯೇ ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ಅವರು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಅವರು ವರದಿಯನ್ನು ಸ್ವೀಕರಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜಾತಿ ಗಣತಿ ವರದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮರು ಸಮೀಕ್ಷೆಗೆ ಆದೇಶ ಮಾಡಲಾಗಿತ್ತು.
ಇದೀಗ ವರದಿ ಸಲ್ಲಿಕೆಯಾಗಿದೆ. ಈ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರು ಅವರು ವರದಿ ಸಲ್ಲಿಕೆ ಮಾಡಿದ್ದರು. ಆದರೆ, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೆ, ಪ್ರಭಾವಿ ಸಮುದಾಯಗಳ ಸ್ವಾಮೀಜಿಗಳು ವರದಿಗೆ ವಿರೋಧ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮರು ಸಮೀಕ್ಷೆಗೆ ಆದೇಶ ಮಾಡಲಾಗಿತ್ತು. ಇದೀಗ ಸಮೀಕ್ಷೆಯ ವರದಿಯನ್ನು ಸ್ವೀಕರಿಸಲಾಗಿದೆ.ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬ ಸಂದರ್ಭದಲ್ಲಿ ಅವರು ವರದಿ ಸ್ವೀಕಾರ ಮಾಡುವ ಮೂಲಕ ಅಹಿಂದ ವರ್ಗಕ್ಕೆ ಸಂದೇಶ ರವಾನೆ ಮಾಡಿದ್ದಾರೆ.
ಈ ವರದಿಯನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಲಾಗುತ್ತದೆ ಎಂಬುದು ಕುತೂಹಲವಾಗಿದೆ. ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರುಗಳಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ.ಸಿ.ಎಂ. ಕುಂದಗೋಳ, ಡಾ.ಜಿ.ಎನ್. ಶ್ರೀಕಂಠಯ್ಯ ಹಾಗೂ ಸದಸ್ಯ ಕಾರ್ಯದರ್ಶಿ ದಯಾನಂದ್ ಮತ್ತಿತರರಿದ್ದರು.






















