SK Home Ad
Home ಸುದ್ದಿ ದೇಶ ಮಾಜಿ CM ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆ ED ದಾಳಿ

ಮಾಜಿ CM ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆ ED ದಾಳಿ

0
64

ಪುತ್ರಿ ವೀಣಾ ಕಂಪನಿಗೆ ಕೋಟಿ ಕೋಟಿ ಪಾವತಿ ಆರೋಪ; ಕೇರಳದಲ್ಲಿ ಇಡಿ ದಾಳಿ ಸಂಚಲನ

ತಿರುವನಂತಪುರ : ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬಕ್ಕೆ ಸಂಬಂಧಿಸಿದ ಆರ್ಥಿಕ ಅಕ್ರಮ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಜಾರಿ ನಿರ್ದೇಶನಾಲಯ (ED) ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದೆ. ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಕೈಗಾರಿಕಾ ರಾಸಾಯನಿಕ ಉತ್ಪಾದನಾ ಸಂಸ್ಥೆಯಾಗಿರುವ Cochin Minerals and Rutile Limited (CMRL) ಗೆ ಸಂಬಂಧಿಸಿದ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಮತ್ತು ಕಾರ್ಪೊರೇಟ್ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ಇಡಿ ಈ ಕ್ರಮ ಕೈಗೊಂಡಿದೆ. ವಿಶೇಷವಾಗಿ, ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ ‘ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಹಣಕಾಸು ವ್ಯವಹಾರಗಳೇ ತನಿಖೆಯ ಕೇಂದ್ರಬಿಂದುವಾಗಿವೆ.

ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೆಂದರೆ, ಕೇರಳ ಹೈಕೋರ್ಟ್ ಇಡಿ ತನಿಖೆಯನ್ನು ರದ್ದುಗೊಳಿಸಬೇಕೆಂಬ ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ದಾಳಿಗಳು ನಡೆದಿವೆ. ಹೀಗಾಗಿ, ಇಡಿ ಈಗ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿರುವ ಸೂಚನೆಗಳು ದೊರಕಿವೆ.

ಆರೋಪ ಏನು? : 2017 ರಿಂದ 2020ರ ಅವಧಿಯಲ್ಲಿ, ಎಕ್ಸಲಾಜಿಕ್ ಸೊಲ್ಯೂಷನ್ಸ್ ಸಂಸ್ಥೆಯು CMRL ಕಂಪನಿಯಿಂದ ಯಾವುದೇ ಸ್ಪಷ್ಟ ಸೇವೆಗಳನ್ನು ನೀಡದೇ ಕೋಟ್ಯಂತರ ರೂಪಾಯಿ ಹಣ ಸ್ವೀಕರಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಮೊದಲಿಗೆ ಸುಮಾರು ₹1.72 ಕೋಟಿ ಹಣ ಪಾವತಿಯಾಗಿರುವ ವಿಚಾರ ಬಹಿರಂಗವಾಗಿತ್ತು. ನಂತರ, ಕೇಂದ್ರ ಸರ್ಕಾರದ ಗಂಭೀರ ವಂಚನೆ ತನಿಖಾ ಕಚೇರಿಯಾದ Serious Fraud Investigation Office (SFIO) ನಡೆಸಿದ ತನಿಖೆಯಲ್ಲಿ, ಒಟ್ಟು ₹2.70 ಕೋಟಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.

SFIO ತನ್ನ ಸುಮಾರು 160 ಪುಟಗಳ ದೂರಿನಲ್ಲಿ ಟಿ. ವೀಣಾ, CMRL ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಸೇರಿದಂತೆ 25 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಉಲ್ಲೇಖಿಸಿದೆ. ಕಂಪನಿಗೆ ಯಾವುದೇ ಸೇವೆ ನೀಡದೇ ಹಣ ಸ್ವೀಕರಿಸಿರುವುದು ಕಾರ್ಪೊರೇಟ್ ವಂಚನೆ ಮತ್ತು ಅಕ್ರಮ ಪಾವತಿಗಳ ವ್ಯಾಪ್ತಿಗೆ ಬರುತ್ತದೆ ಎಂಬ ಅನುಮಾನ ತನಿಖಾ ಸಂಸ್ಥೆಗಳಲ್ಲಿದೆ.

ಇಡಿ ದಾಳಿ ನಡೆದ ಸ್ಥಳಗಳು: ಇಡಿ ಅಧಿಕಾರಿಗಳು ತಿರುವನಂತಪುರ, ಕೊಚ್ಚಿ, ಕೋಳಿಕ್ಕೋಡ್ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ, ಮಾಜಿ ಸಚಿವ ಹಾಗೂ ಪ್ರಸ್ತುತ ಶಾಸಕ ಪಿ.ಎ. ಮುಹಮ್ಮದ್ ರಿಯಾಸ್ (P A Mohammed Riyas) ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಅವರು ಟಿ. ವೀಣಾ ಅವರ ಪತಿಯಾಗಿರುವುದರಿಂದ, ತನಿಖೆಯ ಭಾಗವಾಗಿ ಅವರ ಆರ್ಥಿಕ ದಾಖಲೆಗಳು ಮತ್ತು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಅನುಮೋದನೆ: ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಕಳೆದ ಏಪ್ರಿಲ್ 2025ರಲ್ಲಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಟಿ. ವೀಣಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮೋದನೆ ನೀಡಿತ್ತು. ಅವರ ವಿರುದ್ಧ ಕಂಪನಿ ಕಾಯ್ದೆ 2013ರ ಸೆಕ್ಷನ್ 447 ಅಡಿಯಲ್ಲಿ ಕಾರ್ಪೊರೇಟ್ ವಂಚನೆ ಆರೋಪ ದಾಖಲಾಗುವ ಸಾಧ್ಯತೆ ಇದೆ.

ಈ ಸೆಕ್ಷನ್ ಅಡಿಯಲ್ಲಿ ಅಪರಾಧ ಸಾಬೀತಾದರೆ ಕನಿಷ್ಠ ಆರು ತಿಂಗಳಿಂದ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ ವಂಚನೆ ಮೊತ್ತದ ಮೂರು ಪಟ್ಟು ದಂಡ ವಿಧಿಸುವ ಅವಕಾಶವೂ ಕಾನೂನಿನಲ್ಲಿ ಇದೆ.

ರಾಜಕೀಯ ವಲಯದಲ್ಲಿ ಚರ್ಚೆ: ಪ್ರಸ್ತುತ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಅವರ ಹೆಸರನ್ನು ನೇರ ಆರೋಪಿಯಾಗಿ ಉಲ್ಲೇಖಿಸದಿದ್ದರೂ, ಅವರ ಪುತ್ರಿ ಮತ್ತು ಅಳಿಯ ತನಿಖೆಯ ವ್ಯಾಪ್ತಿಗೆ ಬಂದಿರುವುದು ಕೇರಳ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಈ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸಲು ಮುಂದಾಗಿದ್ದು, ಎಡಪಕ್ಷ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.

ಇನ್ನೊಂದೆಡೆ, ಎಡಪಕ್ಷ ನಾಯಕರು ತನಿಖೆಯನ್ನು ರಾಜಕೀಯ ಪ್ರೇರಿತ ಕ್ರಮವೆಂದು ಆರೋಪಿಸುತ್ತಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಗಳನ್ನು ಕಾಣುವ ಸಾಧ್ಯತೆ ಇದೆ.