ಬೆಳಗಾವಿ: ಹುಬ್ಬಳ್ಳಿಯಿಂದ ಬೆಳಗಾವಿಗೆ ಮೂರು ಬಸ್‌ನಲ್ಲಿ ಬಂದಿದ್ದಾರೆ ಎಂದು ಹೇಳಲಾಗಿದ್ದ 20 ಮಂದಿಯನ್ನು ಪೊಲೀಸರು ತಪಾಸಣೆ ನಡೆಸಿದ್ದು, ಇವರ‍್ಯಾರೂ ಬಾಂಗ್ಲಾ ವಲಸಿಗರಲ್ಲ, ಬದಲಾಗಿ ಚುನಾವಣೆ ಮುಗಿಸಿ ತಮ್ಮ ವೃತ್ತಿಗೆ ಮರಳಿ ಬಂದಿರುವ ಬಂಗಾಳ ಮೂಲದ ಚಿನ್ನದ ಕೆಲಸದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.
ಡಿಸಿಪಿ ನಾರಾಯಣ ಭರಮಣಿಯವರ ನೇತೃತ್ವದಲ್ಲಿ ಬೆಳಗಾವಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಮೂರು ಬಸ್‌ಗಳಲ್ಲಿ ಬಂದಿಳಿದ 20 ಮಂದಿಯನ್ನು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ದು ಆಧಾರ ಕಾರ್ಡ್, ಮೊಬೈಲ್ ಫೋನ್ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಇವರೆಲ್ಲರೂ ಬೆಳಗಾವಿಯ ಶಹಪುರದ ಚಿನ್ನದ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುವವರು ಎಂಬ ಅಂಶ ಬಯಲಾಗಿದೆ.
ಬಂಗಾಳ ಮೂಲದ ಈ ಕಾರ್ಮಿಕರು ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾವಣೆ ಹಾಗೂ ಬೇಸಿಗೆ ರಜೆಯಲ್ಲಿ ತಮ್ಮ ಊರಿಗೆ ತೆರಳಿದ್ದರು. ಇದೀಗ ಮರಳಿ ಕೆಲಸಕ್ಕೆ ಹಾಜರಾಗಲು ಬರುತ್ತಿದ್ದಾಗ ಪೊಲೀಸರ ಕೈಗೆ ತಗಲ್ಹಾಕಿಕೊಂಡಿದ್ದಾರೆ ಎಂಬ ಅಂಶ ಬಯಲಾಗಿದೆ. ಇವರ ಆಧಾರ ಕಾರ್ಡ್ ಅಸಲಿಯೇ ನಕಲಿಯೇ ಎಂಬುದರ ಪರಿಶೀಲನೆ ನಡೆಸಿ ಇವರ ಬೆರಳಚ್ಚುಗಳನ್ನು ಪಡೆದುಕೊಂಡು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ತಾಂತ್ರಿಕ ವಿಚಾರಣೆಗಳನ್ನು ಮುಂದುವರೆಸಲಾಗುವುದು ಎಂದು ಗೊತ್ತಾಗಿದೆ.






















