Home Advertisement
Home ನಮ್ಮ ಜಿಲ್ಲೆ ಉಡುಪಿ ನಿರ್ಮಾಣ ಹಂತದ ಬಾವಿ ಮಣ್ಣು ಕುಸಿತ – ಕಾರ್ಮಿಕನ ಮೃತದೇಹ ಪತ್ತೆ

ನಿರ್ಮಾಣ ಹಂತದ ಬಾವಿ ಮಣ್ಣು ಕುಸಿತ – ಕಾರ್ಮಿಕನ ಮೃತದೇಹ ಪತ್ತೆ

0
62

ಉಡುಪಿ : ಜಿಲ್ಲೆಯ ಮಲ್ಪೆ ಸಮೀಪದ ಕೊಡವೂರು ವ್ಯಾಪ್ತಿಯ ಉದ್ದಿನಹಿತ್ಲು ಪ್ರದೇಶದಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ಮೃತದೇಹವನ್ನು ಮಧ್ಯರಾತ್ರಿ ವೇಳೆ ಹೊರತೆಗೆದ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಕೊಪ್ಪಳ ಮೂಲದ 25 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಬಾವಿಯಲ್ಲಿ ಮಣ್ಣು ತೆಗೆಯುವಾಗ ಅವಘಡ: ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಕೆಲಸಕ್ಕಾಗಿ ಕಾರ್ಕಳದ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಅವರು ಕೊಪ್ಪಳ ಜಿಲ್ಲೆಯ ಐವರು ಕೂಲಿ ಕಾರ್ಮಿಕರನ್ನು ಮೇ 21ರಂದು ಕರೆತಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ

ಕಾರ್ಮಿಕರು ಬಾವಿಯಿಂದ ಮಣ್ಣು ತೆಗೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಸಂಜೆ ಕೆಲಸ ಮುಗಿಯುವ ವೇಳೆಯಲ್ಲಿ ರಮೇಶ್ ಬಾವಿಯೊಳಗೆ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ಬಾವಿಯ ದಂಡೆಯ ಮಣ್ಣು ಕುಸಿದಿದೆ. ಮಣ್ಣು ನೇರವಾಗಿ ಅವರ ಮೈಮೇಲೆ ಬಿದ್ದ ಪರಿಣಾಮ ರಮೇಶ್ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮತ್ತೋರ್ವ ಕಾರ್ಮಿಕ ಪಾರು : ಅದೇ ವೇಳೆ ಬಾವಿಯೊಳಗಿದ್ದ ಇನ್ನೊಬ್ಬ ಕಾರ್ಮಿಕ ತಕ್ಷಣ ಮೇಲಕ್ಕೆ ಬಂದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿದ ತಕ್ಷಣ ಸ್ಥಳೀಯರು ಹಾಗೂ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

7 ಗಂಟೆಗಳ ಕಾಲ ಕಾರ್ಯಾಚರಣೆ: ಮಲ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಕೈಗೊಂಡರು. ಸುಮಾರು ಐದು ಅಡಿ ಆಳದಲ್ಲಿ ಮಣ್ಣಿನಡಿ ಸಿಲುಕಿದ್ದ ರಮೇಶ್ ಅವರ ಮೃತದೇಹ ಪತ್ತೆ ಮಾಡಲು ನಿರಂತರವಾಗಿ ಮಣ್ಣು ಕುಸಿಯುತ್ತಿದ್ದ ಕಾರಣ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು.

ಆದರೂ ಸತತ ಏಳು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಮಧ್ಯರಾತ್ರಿ ವೇಳೆ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಯಿತು.

ಶಾಸಕ ಯಶಪಾಲ್ ಸುವರ್ಣ ಭೇಟಿ : ಘಟನಾ ಸ್ಥಳಕ್ಕೆ ಯಶಪಾಲ್ ಸುವರ್ಣ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ನಿರ್ಮಾಣ ಕಾಮಗಾರಿಗಳ ವೇಳೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.