ಪರ್ವತಾರೋಹಣದಲ್ಲಿ ಹೊಸ ಇತಿಹಾಸ ಬರೆದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ: 8,848 ಮೀಟರ್ ಎತ್ತರದ ಎವರೆಸ್ಟ್‌ನಲ್ಲಿ ಮಹಿಳೆಯರ ವಿಜಯ ಯಾತ್ರೆ
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತನ್ನ ಮೊದಲ ಮಹಿಳಾ ಅಂತರರಾಷ್ಟ್ರೀಯ ಪರ್ವತಾರೋಹಣ ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
8,848 ಮೀಟರ್ ಎತ್ತರದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ (Mount Everest) ಅನ್ನು ಮಹಿಳಾ ತಂಡ ಯಶಸ್ವಿಯಾಗಿ ಏರಿದ್ದು, ಇದು ಐಟಿಬಿಪಿಯ ಪರ್ವತಾರೋಹಣ ಪರಂಪರೆಯಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ. ಈ ದಂಡಯಾತ್ರೆಯಲ್ಲಿ 11 ಮಹಿಳಾ ಪರ್ವತಾರೋಹಿಗಳು ಹಾಗೂ ಮೂವರು ತಾಂತ್ರಿಕ ಮತ್ತು ಸಹಾಯಕ ಸಿಬ್ಬಂದಿ ಸೇರಿ ಒಟ್ಟು 14 ಮಂದಿ ಭಾಗವಹಿಸಿದ್ದರು.
ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ
ತಂಡವು ನೇಪಾಳ ಭಾಗದ ದಕ್ಷಿಣ ಕೋಲ್ ಮಾರ್ಗದ ಮೂಲಕ ಎವರೆಸ್ಟ್ ಶಿಖರಾರೋಹಣ ಕೈಗೊಂಡಿತ್ತು. ಐಟಿಬಿಪಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಮೇ 21ರಂದು ಬೆಳಗಿನ ಜಾವ 12:52 ಗಂಟೆಗೆ ಮೊದಲ ತಂಡದ ಸದಸ್ಯರು ಯಶಸ್ವಿಯಾಗಿ ಎವರೆಸ್ಟ್ ಶಿಖರ ತಲುಪಿದರು. ನಂತರ ಉಳಿದ ಸದಸ್ಯರೂ ಸುರಕ್ಷಿತವಾಗಿ ಶಿಖರಾರೋಹಣ ಪೂರ್ಣಗೊಳಿಸಿದರು.
ಈ ಸಾಧನೆ ದೇಶದ ಭದ್ರತಾ ಪಡೆಗಳಲ್ಲಿನ ಮಹಿಳಾ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಐಟಿಬಿಪಿ ದೀರ್ಘಕಾಲದಿಂದ ಪರ್ವತಾರೋಹಣ ಮತ್ತು ಹಿಮಾಲಯ ಪ್ರದೇಶದ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ ಪಡೆ ಎಂದು ಗುರುತಿಸಿಕೊಂಡಿದೆ. ಹಿಮಾಚ್ಛಾದಿತ ಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಈ ಪಡೆ, ಅನೇಕ ಬಾರಿ ಎವರೆಸ್ಟ್ ಸೇರಿದಂತೆ ವಿಶ್ವದ ಎತ್ತರದ ಪರ್ವತ ಶಿಖರಗಳನ್ನು ಏರಿದ ಅನುಭವ ಹೊಂದಿದೆ.
ಇದನ್ನೂ ಓದಿ: ಕರ್ನಾಟಕ ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
ಆದರೆ ಸಂಪೂರ್ಣ ಮಹಿಳಾ ಪ್ರಧಾನ ತಂಡದ ಈ ಸಾಧನೆ ವಿಶೇಷ ಮಹತ್ವ ಪಡೆದಿದೆ. ಈ ದಂಡಯಾತ್ರೆ ಮಹಿಳಾ ಸಬಲೀಕರಣದ ಸಂಕೇತವಾಗಿಯೂ ಪರಿಗಣಿಸಲಾಗುತ್ತಿದೆ. ಕಠಿಣ ಹವಾಮಾನ, ಆಮ್ಲಜನಕದ ಕೊರತೆ ಮತ್ತು ಅಪಾಯಕಾರಿ ಹಾದಿಗಳನ್ನು ಎದುರಿಸಿ ಮಹಿಳಾ ಪರ್ವತಾರೋಹಿಗಳು ಸಾಧಿಸಿದ ಈ ಯಶಸ್ಸಿಗೆ ದೇಶದ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ಭದ್ರತಾ ಪಡೆಗಳಲ್ಲಿ ಮಹಿಳೆಯರ ಪಾತ್ರ ನಿರಂತರವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಐಟಿಬಿಪಿಯ ಈ ಸಾಧನೆ ಮುಂದಿನ ಪೀಳಿಗೆಯ ಮಹಿಳೆಯರಿಗೆ ಪ್ರೇರಣೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.




















