ಒಂದೇ ವಾರದಲ್ಲಿ ಎರಡನೇ ದುರಂತ; ನಿಡಗುಂದಿಯಲ್ಲಿ ಮನೆ ಕುಸಿದು ಮಹಿಳೆ ಸಾವು
ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಸಮೀಪ ಗುರುವಾರ ನಸುಕಿನಲ್ಲಿ ನಡೆದ ದುರ್ಘಟನೆಯಲ್ಲಿ ಮನೆ ಚಾವಣಿ ಕುಸಿದು ಮಹಾದೇವಿ ವಾರದ (55) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಹಳೆಯ ಮನೆಯ ಗೋಡೆ ಹಾಗೂ ಚಾವಣಿ ನೆನೆದು ಬಲಹೀನಗೊಂಡಿದ್ದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯ ಸಮಯದಲ್ಲಿ ಮಹಾದೇವಿ ಅವರು ಮನೆಯಲ್ಲಿ ನಿದ್ರಿಸುತ್ತಿದ್ದರು. ಇದೇ ವೇಳೆ ಹಳೆಯ ಮನೆಯ ಚಾವಣಿ ಏಕಾಏಕಿ ಕುಸಿದು ಅವರ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯ ಹೊರಭಾಗದಲ್ಲಿ ಮಲಗಿದ್ದ ಅವರ ಪತಿ ಶಿವಾನಂದ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಮನಕಲಕುವ ದೃಶ್ಯಗಳು ಕಂಡುಬಂದವು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲೂ ದುಃಖದ ವಾತಾವರಣ ಆವರಿಸಿತ್ತು.
ಸುದ್ದಿ ತಿಳಿದು ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಇನ್ನು ವಿಜಯಪುರ ಜಿಲ್ಲೆಯಲ್ಲಿ ಒಂದೇ ವಾರದ ಅವಧಿಯಲ್ಲಿ ಇದು ಎರಡನೇ ಮನೆ ಕುಸಿತ ದುರಂತವಾಗಿರುವುದು ಆತಂಕ ಮೂಡಿಸಿದೆ. ಕಳೆದ ಮೇ 15ರಂದು ಮೋರಟಗಿ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ನಾಲ್ವರು ಸಾವನ್ನಪ್ಪಿದ ಘಟನೆ ಇನ್ನೂ ಜನಮನದಿಂದ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಮಳೆಯ ಸಮಯದಲ್ಲಿ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಗಳ ಬಗ್ಗೆ ಆಡಳಿತವು ವಿಶೇಷ ಗಮನಹರಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬರುತ್ತಿದೆ.























