ಕೊಡಗು: ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಕುಟುಂಬದೊಂದಿಗೆ ಆಗಮಿಸಿದ್ದ ಪ್ರವಾಸಿ ಮಹಿಳೆಯೊಬ್ಬರು ಆನೆಗಳ ನಡುವಿನ ಭೀಕರ ಕಾದಾಟದ ವೇಳೆ ಕಾಡಾನೆಯ ಕಾಲ್ತುಳಿತಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ದೈನಂದಿನ ಜಂಜಾಟಗಳಿಂದ ದೂರ ಸರಿದು, ಪ್ರಕೃತಿಯ ಮಡಲಲ್ಲಿ ನಾಲ್ಕು ದಿನ ನೆಮ್ಮದಿಯಿಂದ ಕಳೆಯೋಣ ಎಂದು ಬಂದಿದ್ದ ಕರಾವಳಿ ಮೂಲದ ಕುಟುಂಬವೊಂದು ವಿಧಿಯ ಕ್ರೂರ ಆಟಕ್ಕೆ ತುತ್ತಾಗಿದೆ. ಮೃತ ಮಹಿಳೆ ತನ್ನ ಪತಿ ಹಾಗೂ ಆರು ವರ್ಷದ ಪುಟ್ಟ ಹೆಣ್ಣು ಮಗಳೊಂದಿಗೆ ಕೊಡಗು ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಸ್ಥಳೀಯ ಆನೆಗಳ ಕ್ಯಾಂಪ್‌ನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆಯನ್ನು ವೀಕ್ಷಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕ್ಯಾಂಪ್‌ನಲ್ಲಿದ್ದ ಆನೆಗಳ ಆಟವನ್ನು ಕಂಡು ಪ್ರವಾಸಿಗರೆಲ್ಲಾ ಸಂಭ್ರಮಿಸುತ್ತಿದ್ದ ಕ್ಷಣದಲ್ಲೇ, ಇದ್ದಕ್ಕಿದ್ದಂತೆ ಆನೆಗಳ ನಡುವೆ ಭೀಕರ ಜಗಳ ಆರಂಭವಾಗಿದೆ. ಮದವೇರಿದ ದೈತ್ಯ ಜೀವಿಗಳ ಆರ್ಭಟ ಮತ್ತು ಘರ್ಜನೆಗೆ ಇಡೀ ಆವರಣವೇ ನಡುಗಿದ್ದು, ಸುತ್ತಲೂ ನೆರೆದಿದ್ದ ಸಾರ್ವಜನಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಈ ವೇಳೆ ಉಂಟಾದ ಗೊಂದಲದಲ್ಲಿ ಮಹಿಳೆ ಆನೆಯ ಮುಸ್ಠಿಗೆ ಸಿಲುಕಿದ್ದಾರೆ.
ಕಾಡಾನೆಗಳ ಕಾದಾಟದ ತೀವ್ರತೆಗೆ ಸಿಲುಕಿದ ಅಮಾಯಕ ಮಹಿಳೆಯನ್ನು ಆನೆಯೊಂದು ಭೀಕರವಾಗಿ ತುಳಿದಿದೆ. ಪತಿ ಮತ್ತು ಆರು ವರ್ಷದ ಪುಟ್ಟ ಕಂದಮ್ಮನ ಕಣ್ಣೆದುರೇ ಮಹಿಳೆ ರಕ್ತದ ಮಡುವಿನಲ್ಲಿ ಜೀವ ಬಿಟ್ಟಿದ್ದು, ಸ್ಥಳದಲ್ಲಿದ್ದವರ ಕರುಳು ಹಿಂಡುವಂತಿತ್ತು. ಕಣ್ಣೆದುರೇ ಹೆಂಡತಿ ಹಾಗೂ ಹೆತ್ತ ಕರುಳು ಕೊನೆಯುಸಿರೆಳೆದಾಗ ಆ ಕುಟುಂಬ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಸಂತೋಷದಿಂದ ನಲಿಯಬೇಕಾಗಿದ್ದ ಪುಟ್ಟ ಮಗಳ ಕಣ್ಣುಗಳು ಭೀತಿಯಿಂದ ನಿಬ್ಬೆರಗಾಗಿದ್ದು, ಪ್ರೀತಿಯ ಸಂಸಾರದಲ್ಲಿ ಈಗ ಕತ್ತಲು ಆವರಿಸಿದೆ.
ನೆಮ್ಮದಿ ಅರಸಿ ಬಂದ ಜಾಗದಲ್ಲೇ ಪ್ರಾಣಪಕ್ಷಿ ಹಾರಿಹೋಗಿದ್ದು, ಇಡೀ ಕೊಡಗು ಜಿಲ್ಲೆಯನ್ನು ಈ ಘಟನೆ ಕಣ್ಣೀರಲ್ಲಿ ಮುಳುಗಿಸಿದೆ. ಪ್ರಕೃತಿಯ ವಿಸ್ಮಯವನ್ನು ಸವಿಯಲು ಹೋದವರು ಇಂದು ಕೇವಲ ನೆನಪಾಗಿ ಉಳಿಯುವಂತಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರವಾಸಿಗರ ಸುರಕ್ಷತೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.























