ಹೈಕೋರ್ಟ್‌ನಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಹೊಸ ತಿರುವು : ಕೇಜ್ರಿವಾಲ್ ಅರ್ಜಿಗೆ ಹೊಸ ನ್ಯಾಯಮೂರ್ತಿ ವಿಚಾರಣೆ
ದೆಹಲಿ: ಮದ್ಯ ನೀತಿ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೀಗ ನ್ಯಾಯಮೂರ್ತಿ ಮನೋಜ್ ಜೈನ್ ಅವರು ನಡೆಸಲಿದ್ದಾರೆ. ಈ ಹಿಂದೆ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ನಡೆಸುತ್ತಿದ್ದರು. ಆದರೆ, ಅವರ ವಿರುದ್ಧ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆ ಅವರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ಆರೋಪ ರದ್ದು ಆದೇಶ ಪ್ರಶ್ನಿಸಿದ CBI : ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಮಾಜಿ ಸಿಎಂ ಕೇಜ್ರಿವಾಲ್ ಸೇರಿದಂತೆ ಕೆಲ ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳನ್ನು ತಿರಸ್ಕರಿಸಿ ಪ್ರಕರಣವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (CBI) ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಲಾಗಿದೆ. ಪ್ರಕರಣದ ಮುಂದಿನ ಹಂತದ ಕುರಿತು ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.
ಕೋರ್ಟ್‌ನಲ್ಲಿ ತೀವ್ರ ವಾದ ಪ್ರತಿವಾದ : ಈ ಹಿಂದೆ ನಡೆದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಿಬಿಐ ಪರವಾಗಿ ವಾದ ಮಂಡಿಸಿದ್ದರು. ಇನ್ನೊಂದೆಡೆ, ಆಮ್ ಆದ್ಮಿ ಪಾರ್ಟಿ (AAP) ನ್ಯಾಯಮೂರ್ತಿ ಬದಲಾವಣೆಯನ್ನು ತನ್ನ “ಕಾನೂನು ವಿಜಯ” ಎಂದು ಬಣ್ಣಿಸಿದೆ. ಕೇಜ್ರಿವಾಲ್ ಕೂಡ “ಸತ್ಯದ ವಿಜಯವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದರು.
ಇತರೆ ಪ್ರಕರಣಗಳ ವರ್ಗಾವಣೆ : ಈ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಅವರಿದ್ದ ಪೀಠ ಈ ಸಂಬಂಧದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ.
ರಾಜಕೀಯವಾಗಿ ಮಹತ್ವ ಪಡೆದ ಪ್ರಕರಣ : ದೆಹಲಿ ಮದ್ಯ ನೀತಿ ಪ್ರಕರಣವು ಕಳೆದ ಕೆಲ ವರ್ಷಗಳಿಂದ ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಾರ್ಟಿ ನಾಯಕರು ಈ ಪ್ರಕರಣವನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸುತ್ತಿದ್ದರೆ, ತನಿಖಾ ಸಂಸ್ಥೆಗಳು ಅಕ್ರಮ ಹಣಕಾಸು ವ್ಯವಹಾರ ಹಾಗೂ ನೀತಿ ರೂಪಿಕರಣದಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಿವೆ.
ಪ್ರಕರಣದ ಮುಂದಿನ ವಿಚಾರಣೆ ಹಾಗೂ ಹೈಕೋರ್ಟ್‌ನ ತೀರ್ಪು ದೆಹಲಿ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.





















