ಬೆಳಗಾವಿ: ಹೆಚ್ಚಿನ ಹಣದ ಆಸೆಗೆ ಬಲಿಯಾಗಿ ದುಡಿದಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಿರುವ ಅನೇಕ ಪ್ರಸಂಗಗಳು ಆಗಾಗ ವರದಿಯಾಗುತ್ತಿದ್ದರೂ ಬೆಳಗಾವಿಯಲ್ಲಿ ಇಂತಹದೇ ಭಾರಿ ವಂಚನೆಯ ಪ್ರಕರಣವೀಗ ರಾಜ್ಯಾದ್ಯಂತ ಸುದ್ದಿ ಮಾಡಿದೆ.
ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚನೆ ಎಸಗಿದ್ದಾರೆಂಬ ಶಿವಂ ಅಸೋಸಿಯೇಟ್ಸ್ ಪ್ರಕರಣ ಈಗ ಬೆಳಗಾವಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕಾನೂನು ಕ್ರಮದ ಹಂತ ತಲುಪಿದೆ.
ಸಂಸ್ಥೆ ನಡೆಸುತ್ತಿದ್ದ ಶಿವಾನಂದ ಎಸ್. ನೀಲಣ್ಣವರನನ್ನು ಮಾಳಮಾರುತಿ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಸಂಸ್ಥೆಗೆ ಅಗತ್ಯ ಲೈಸೆನ್ಸ್, ಆರ್‌ಬಿಐ ಮಾನ್ಯತೆ ಅಥವಾ ಕಾನೂನುಬದ್ಧ ಅನುಮತಿಯೇ ಇಲ್ಲ ಎಂಬ ಸಂಗತಿ ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆದಿದೆ. ಶನಿವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬೃಹತ್ ಪ್ರಮಾಣದ ವಂಚನೆ ಪ್ರಕರಣದ ಬಗ್ಗೆ ವಿವರ ನೀಡಿದರು. ಇಂತಹ ಬೋಗಸ್ ಕಂಪನಿಗಳಲ್ಲಿ ಠೇವಣಿ ಇಡುವ ಮೊದಲು ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಬೆಳಕಿಗೆ ಬಂದದ್ದು ಹೇಗೆ?: ಸೋಷಿಯಲ್ ಮೀಡಿಯಾ, ಮಾಧ್ಯಮ ವರದಿಗಳು, ಮಾರ್ಕೆಟ್ ಇಂಟಲಿಜೆನ್ಸ್ ಮಾಹಿತಿ ಹಾಗೂ ಸಾರ್ವಜನಿಕ ವಲಯದಿಂದ ಬಂದ ಸುಳಿವು ಆಧರಿಸಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಚಟುವಟಿಕೆಗಳ ಮೇಲೆ ಒಂದು ತಿಂಗಳಿನಿಂದ ನಿಗಾ ವಹಿಸಲಾಗಿತ್ತು.
ಏ. 29ರಂದು ಕೆಪಿಐಡಿ ಹಾಗೂ ಬಡ್ಸ್ ಕಾಯ್ದೆಯಡಿ ವಿಶೇಷ ಸೆಲ್ ರಚಿಸಲಾಗಿತ್ತು. ಸಂಸ್ಥೆಯು ಸಾರ್ವಜನಿಕರಿಂದ ಠೇವಣಿ ಹಣ ಸಂಗ್ರಹಿಸುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಆರ್‌ಸಿಎಸ್ ಅಧಿಕಾರಿಗಳ ತಂಡ ಅದರ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನೋಂದಣಿ ಮಾನ್ಯತೆ ಇಲ್ಲ: ಪರಿಶೀಲನೆಯ ವೇಳೆ ಅಧಿಕೃತ ಅನುಮತಿ ಪತ್ರ, ನೋಂದಣಿ ಮಾನ್ಯತೆ ಅಥವಾ ಆರ್‌ಬಿಐ ಅನುಮೋದನೆ ತೋರಿಸಲು ಸಂಸ್ಥೆಯವರು ವಿಫಲರಾಗಿದ್ದಾರೆ. ಸಾರ್ವಜನಿಕರಿಂದ ಹಣ ಸ್ವೀಕರಿಸಿ, ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಪತ್ತೆಯಾದವು. ಒಂದು ಲಕ್ಷ ರೂ. ಕನಿಷ್ಠ ಠೇವಣಿಗೆ ಅತ್ಯಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಲಾಗುತ್ತಿತ್ತು ಎಂಬ ಅಂಶವೂ ತನಿಖೆಯಲ್ಲಿ ಹೊರಬಿದ್ದಿದೆ.
ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆದ ತನಿಖೆಯ 150 ಪುಟಗಳ ಸಮಗ್ರ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. ಅದನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ವರದಿ ಕಳುಹಿಸಲಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಲೇ ವಿಶೇಷ ನ್ಯಾಯಾಲಯ ರಚನೆಗೆ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮುಂದಿನ ಹಂತವಾಗಿ ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ 35 ಸಾವಿರ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಹಣದ ನಿಖರ ಮೊತ್ತವನ್ನು ಈಗಲೇ ಬಹಿರಂಗಪಡಿಸಲಾಗುವುದಿಲ್ಲ. ಸೀಜರ್ ಪ್ರಕ್ರಿಯೆ ಹಾಗೂ ದಾಖಲೆ ಪರಿಶೀಲನೆ ಪೂರ್ಣಗೊಂಡ ಬಳಿಕವೇ ಠೇವಣಿ ಮೊತ್ತದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದರು. ಪ್ರಾಥಮಿಕ ಅಂದಾಜಿನಲ್ಲಿ 50 ಕೋಟಿಗೂ ಅಧಿಕ ಹಣ ಸಂಗ್ರಹವಾಗಿರುವ ಶಂಕೆ ಇದೆ ಎಂದರು.





















