Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ: ಐವರ ಬಂಧನ

ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ: ಐವರ ಬಂಧನ

0
111

ದಾವಣಗೆರೆ: ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿ 18.80 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ನಗರದ ಪಂಚಮಿ ಅಲಿಯಾಸ್ ಪೂಜಾ ಅಲಿಯಾಸ್ ಸಮೀನಾ (29), ಸುರೇಶ್ (34), ಅಣಜಿ ಗ್ರಾಮದ ಜಗದೀಶ (35), ದಾವಣಗೆರೆ ನಗರದ ಗಂಗಾ ಅಲಿಯಾಸ್ ಮಲ್ಲೇಶ್ ನಾಯ್ಕ್ (25), ವೆಂಕಟೇಶ್ (30) ಬಂಧಿತ ಆರೋಪಿಗಳು.

ಬಂಧಿತರಿಂದ 10.20 ಲಕ್ಷ ರೂ. ಮೌಲ್ಯದ 80.16 ಗ್ರಾಂ ತೂಕದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ 8 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 60 ಸಾವಿರ ಮೌಲ್ಯದ ಹೊಂಡ ಆಕ್ಟಿವಾ ಸೇರಿ ಒಟ್ಟು 18.80 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಹಿನ್ನೆಲೆ: ಈಚೆಗೆ ಪರಿಚಯವಾಗಿದ್ದ ಪಂಚಮಿ ಎಂಬ ಮಹಿಳೆ, ಸ್ವಲ್ಪ ಮಾತನಾಡುವುದಿದೆ ಎಂದು ಹೇಳಿ ಹರಿಹರಕ್ಕೆ ಹೋಗುವ ಹಳೇ ಪಿ.ಬಿ.ರಸ್ತೆಯ ಹಳೇಬಾತಿ ಮೂಲಕ ಶಿವನಹಳ್ಳಿ ರಸ್ತೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಇಬ್ಬರು ಮಾತನಾಡುತ್ತಿರುವ ಸಂದರ್ಭದಲ್ಲಿ ಒಂದು ಇನ್ನೋವಾ ಕಾರು ಹಾಗೂ ಬೈಕ್‌ನಲ್ಲಿ ಬಂದ ನಾಲ್ವರು ವ್ಯಕ್ತಿಗಳು ‘ನನ್ನ ತಂಗಿಯನ್ನು ಏಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀಯಾ’ ಎಂದು ಏಕಾಏಕಿ ಹಲ್ಲೆ ನಡೆಸಿ, ಮೈಮೇಲೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಭಿಷೇಕ ಎಂಬುವರು 2026ರ ಮೇ 11 ರಂದು ದೂರು ನೀಡಿದ್ದರು.