ಬೆಳಗಾವಿ: ಹಣದಾಸೆಗೆ ನನ್ನ ಪತ್ನಿಗೆ ಮತ್ತೊಂದು ಮದುವೆ ಮಾಡುತ್ತಿದ್ದಾರೆ ದಯವಿಟ್ಟು ನಿಲ್ಲಿಸಿ ಎಂದು ಪತಿ ಪೊಲೀಸರಿಗೆ ಮೊರೆ ಹೋದ ವಿಲಕ್ಷಣ ಘಟನೆ ಬೆಳಗಾವಿ ಹಿರೇಬಾಗೇವಾಡಿಯಲ್ಲಿ ನಡೆದಿದೆ.
ಹಣದಾಸೆಗಾಗಿ ನನ್ನ ಪತ್ನಿಯನ್ನು ಆಕೆಯ ತವರು ಮನೆಯವರೇ ಇನ್ನೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ನಾಳೆಯೇ ಬುಧವಾರ ನಡೆಯುವ ಮದುವೆ ನಿಲ್ಲಿಸಿ ನ್ಯಾಯ ಕೊಡಿಸಿ ಎಂದು ಪತಿರಾಯನೊಬ್ಬ ಪೊಲೀಸ್ ಮೊರೆ ಹೋಗಿದ್ದಾನೆ.
ಈ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿರುವ ಸಂತ್ರಸ್ತ ವೆಂಕಟೇಶ ರಾಥೋಡ, 2016ರಿಂದಲೇ ಪರಿಚಯವಾದ ಯುವತಿ ಮಂಜುಳಾ ಹಂಚಿನಮನಿಯನ್ನು 2022ರಲ್ಲಿ ಮದುವೆಯಾಗಿದ್ದೇನೆ. ನಾನು ಹಾಗೂ ಮಂಜುಳಾ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಎಂದು ದಾಖಲೆ ತೋರಿಸಿದ್ದಾರೆ.
ಆದರೆ, ತಮ್ಮ ಮಾವ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ್ ಹಂಚಿನಮನಿ ಅವರು ಮಂಜುಳಾಳನ್ನು ತವರು ಮನೆಯಲ್ಲಿ ಕೂಡಿಹಾಕಿದ್ದು, ತಮ್ಮ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೆ ಕಳುಹಿಸಿದ್ದರು. ಇದಲ್ಲದೇ ಹಿರೆಬಾಗೇವಾಡಿಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದರು.
ಇದೀಗ ನಾಳೆಯೇ ಆಕೆಯನ್ನು ಮತ್ತೊಬ್ಬರಿಗೆ ಮದುವೆ ಮಾಡಲು ಯತ್ನಿಸಲಾಗುತ್ತಿದೆ. ಪೊಲೀಸರು ತಕ್ಷಣ ಮದ್ಯಪ್ರವೇಶಿಸಿ ಮದುವೆ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.






















