ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತ–ಬಾಂಗ್ಲಾದೇಶ ಗಡಿ ಪ್ರದೇಶಕ್ಕೆ ಬೇಲಿ ಹಾಕಲು ಗಡಿ ಭದ್ರತಾ ಪಡೆ (ಬಿಎಸ್ಎಫ್)ಗೆ ಭೂಮಿ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರಕಾರ ಸೋಮವಾರ ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ನಿರ್ಮಾಣಕ್ಕಾಗಿ ಸುಮಾರು 105 ಎಕರೆ ಭೂಮಿಯನ್ನು ಕೇಂದ್ರಕ್ಕೆ ವರ್ಗಾಯಿಸಲು ಒಪ್ಪಿಗೆ ನೀಡಲಾಗಿದ್ದು, ಈ ಪ್ರಕ್ರಿಯೆಯು ಇಂದಿನಿಂದ ಪ್ರಾರಂಭವಾಗಿ 45 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸುವೇಂದು ತಿಳಿಸಿದ್ದಾರೆ.
ಬಾಂಗ್ಲಾ ಒಳನುಸುಳುವಿಕೆಯನ್ನು ತಡೆಗಟ್ಟುವುದು ಬಿಜೆಪಿಯ ಪ್ರಮುಖ ಚುನಾವಣಾ ಪ್ರಣಾಳಿಕೆಯಲ್ಲಿ ಒಂದಾಗಿತ್ತು. ಅಲ್ಲದೇ ಬಾಂಗ್ಲಾ ನುಸುಳುಕೋರರಿಗೆ ಅವಕಾಶ ನೀಡಲೆಂದೇ ಟಿಎಂಸಿ ಗಡಿ ತೆರೆದಿಟ್ಟಿದೆ ಎಂದು ಬಿಜೆಪಿ ಆರೋಪಿಸಿತ್ತು.





















