Home Advertisement
Home ಕ್ರೀಡೆ IPL 2026: ಪ್ಲೇ ಆಫ್ ರೇಸ್‌ನಿಂದ ಹೊರಬೀಳುವುದೇ ಲಖನೌ?

IPL 2026: ಪ್ಲೇ ಆಫ್ ರೇಸ್‌ನಿಂದ ಹೊರಬೀಳುವುದೇ ಲಖನೌ?

0
62

ಲಖನೌ: ಐಪಿಎಲ್ 2026 ರೋಚಕ ಘಟ್ಟ ತಲುಪಿದ್ದು, ಇಂದು ಲಖನೌನ ಏಕಾನ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಅತಿಥೇಯ ತಂಡ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಈಗಾಗಲೇ ಅಂಕಪಟ್ಟಿಯಲ್ಲಿ ಲಖನೌ ಕೊನೆಯ ಸ್ಥಾನದಲ್ಲಿದ್ದು, ಈ ಪಂದ್ಯ ಗೆದ್ದರೆ ಮಾತ್ರ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಹಾಗಾಗಿ, ಒತ್ತಡದ ಮಧ್ಯೆಯೂ ರಿಷಬ್ ಪಂತ್ ಮುಂದಾಳತ್ವದ ತಂಡ ಗೆಲ್ಲಲೇಬೇಕಿದೆ.

ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತಿದ್ದರೂ, ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು (379 ರನ್), ತಂಡದ ಶಕ್ತಿಯಾಗಿದ್ದಾರೆ. ಆದರೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಅವರ ಜಾಗದಲ್ಲಿ ಜೇಕಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಏಕಾನ ಪಿಚ್‌ ಸಾಂಪ್ರದಾಯಿಕವಾಗಿ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿ. ಇಲ್ಲಿನ ಸರಾಸರಿ ಮೊತ್ತ 155-160 ರನ್ ಆಗಿದ್ದು, ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗಬಹುದು. ಪಂದ್ಯದ ವೇಳೆ ತಾಪಮಾನ 29ರ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಹವಾಮಾನವು ತಿಳಿಯಾಗಿರಲಿದೆ. ಉಭಯ ತಂಡಗಳಲ್ಲಿರುವ ಆಟಗಾರರ ಮುಖಾಮುಖಿಯೂ ಗಮನ ಸೆಳೆದಿದ್ದು, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ ನಡುವಿನ ಕಾದಾಟ ಪಂದ್ಯದ ಹೈಲೈಟ್ ಆಗಲಿದೆ.

ಶಮಿ ಈ ಹಿಂದೆ ಕೊಹ್ಲಿಯನ್ನು 5 ಬಾರಿ ಔಟ್ ಮಾಡಿದ್ದಾರೆ. ಅದೇ ರೀತಿ ಎಲ್‌ಎಸ್‌ಜಿ ನಾಯಕ ರಿಷಬ್ ಪಂತ್ ಹಾಗೂ ಭುವನೇಶ್ವರ್ ಕುಮಾರ್ ಮಧ್ಯೆಯೂ ಪೈಪೋಟಿ ಆಸಕ್ತಿಕರವಾಗಿರಲಿದೆ. ಏಕೆಂದ್ರೆ, ಲಖನೌ ನಾಯಕ ಪಂತ್ ಫಾರ್ಮ್‌ಗೆ ಮರಳಲು ಕಾಯುತ್ತಿದ್ದಾರೆ, ಆದರೆ ಭುವಿ ಅವರ ಸ್ವಿಂಗ್ ಬೌಲಿಂಗ್ ಅವರಿಗೆ ಸವಾಲಾಗಬಹುದು.

ಆರ್‌ಸಿಬಿ ಪರ ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಮಿಂಚುತ್ತಿದ್ದರೆ, ಲಖನೌ ಪರ ಪ್ರಿನ್ಸ್ ಯಾದವ್ ವಿಕೆಟ್ ಪಡೆಯುತ್ತಿದ್ದಾರೆ. ಸೋಲಿನಿಂದ ಚೇತರಿಸಿಕೊಂಡು ಅಗ್ರಸ್ಥಾನಕ್ಕೇರಲು ಬೆಂಗಳೂರು ಹವಣಿಸುತ್ತಿದ್ದರೆ, ಲಖನೌ ತನ್ನ ತವರು ಮೈದಾನದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿದೆ.

ಇತ್ತ ಅಂಕಪಟ್ಟಿಯಲ್ಲಿ ಆರ್‌ಸಿಬಿ ಕೂಡ ಅಗ್ರಸ್ಥಾನದಕ್ಕೇರಲು ಅವಕಾಶವಿದ್ದು, ಈ ಆವೃತ್ತಿಯಲ್ಲಿ ತನ್ನ 7ನೇ ಗೆಲುವು ಸಾಧಿಸಬೇಕಿದೆ. ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯ ಗೆದ್ದರೆ, ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಬಹುದು.