Home Advertisement
Home ಸುದ್ದಿ ದೇಶ ED ದಾಳಿಯಲ್ಲಿ ಸಿನಿಮೀಯ ದೃಶ್ಯ : ಕಿಟಕಿಯಿಂದ ಹಾರಿದ ಹಣದ ಚೀಲಗಳು

ED ದಾಳಿಯಲ್ಲಿ ಸಿನಿಮೀಯ ದೃಶ್ಯ : ಕಿಟಕಿಯಿಂದ ಹಾರಿದ ಹಣದ ಚೀಲಗಳು

0
98

ಚಂಡೀಗಢ: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್ ಪ್ರದೇಶದಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ವೇಳೆ ಸಿನಿಮಾವನ್ನು ಹೋಲಿಸುವ ರೀತಿಯ ಘಟನೆ ನಡೆದಿದ್ದು, ಕಟ್ಟಡದ 9ನೇ ಮಹಡಿಯಿಂದ ಲಕ್ಷಾಂತರ ರೂಪಾಯಿ ನಗದು ತುಂಬಿದ್ದ ಚೀಲಗಳನ್ನು ಹೊರಕ್ಕೆ ಎಸೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಖರಾರ್‌ನ ವೆಸ್ಟರ್ನ್ ಟವರ್ಸ್ (Western Towers) ವಸತಿ ಸಮುಚ್ಚಯದ ಫ್ಲಾಟ್ ಸಂಖ್ಯೆ 906 ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಒಳಗಿದ್ದವರು ಎರಡು ಚೀಲಗಳನ್ನು ಕಿಟಕಿಯಿಂದ ಕೆಳಗೆ ಎಸೆದಿದ್ದಾರೆ ಎನ್ನಲಾಗಿದೆ. ಆ ಚೀಲಗಳಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದು, ಸುಮಾರು 21 ರಿಂದ 25 ಲಕ್ಷ ರೂ. ಹಣ ಪತ್ತೆಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಹಣ ತೆಗೆದುಕೊಂಡು ಪರಾರಿಯಾಗಲು ಯತ್ನ : ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಳಗೆ ಬಿದ್ದ ಹಣವನ್ನು ಸಂಗ್ರಹಿಸಿ ಪರಾರಿಯಾಗಲು ಯತ್ನಿಸಿದ ಬಿಳಿ ಕಾರಿನ ಚಾಲಕನನ್ನು ಇಡಿ ಅಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ. ಘಟನೆಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದಾಳಿಯ ತೀವ್ರತೆ ಕುರಿತು ಚರ್ಚೆ ಆರಂಭವಾಗಿದೆ.

ಐಟಿ ಉದ್ಯಮಿ ನಿತಿನ್ ಗೋಹಲ್ ಮನೆ ಮೇಲೆ ದಾಳಿ: ಈ ದಾಳಿ ಐಟಿ ಉದ್ಯಮಿ ನಿತಿನ್ ಗೋಹಲ್ ಅವರಿಗೆ ಸೇರಿದ ಸ್ಥಳದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ , ನಿತಿನ್ ಗೋಹಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿಶೇಷ ಕರ್ತವ್ಯಾಧಿಕಾರಿ ರಾಜಬೀರ್ ಸಿಂಗ್ ಘುಮ್ಮನ್ ಅವರ ಆಪ್ತರು ಎಂದು ಆರೋಪಿಸಿದ್ದಾರೆ.

ಭೂ ಅಕ್ರಮ ಮತ್ತು ಹಣಕಾಸು ವಂಚನೆ ತನಿಖೆ : ಗ್ರೇಟರ್ ಮೊಹಾಲಿ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (GMADA) ವ್ಯಾಪ್ತಿಯಲ್ಲಿ ಭೂಬಳಕೆ ಬದಲಾವಣೆ (CLU) ಪರವಾನಗಿ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಇಡಿ ತನಿಖೆ ನಡೆಸುತ್ತಿದೆ. ಜೊತೆಗೆ ಸನ್‌ಟೆಕ್ ಸಿಟಿ ಯೋಜನೆಗೆ ಸಂಬಂಧಿಸಿದ ಹಣಕಾಸು ವಂಚನೆ ಆರೋಪಗಳೂ ತನಿಖೆಯ ವ್ಯಾಪ್ತಿಗೆ ಬಂದಿವೆ.

ಈ ಕಾರ್ಯಾಚರಣೆಯ ಭಾಗವಾಗಿ ಪಂಜಾಬ್ ಮತ್ತು ಚಂಡೀಗಢದಾದ್ಯಂತ ಒಟ್ಟು 12 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಎಬಿಎಸ್ ಟೌನ್‌ಶಿಪ್ ಮತ್ತು ಅಲ್ಟಸ್ ಬಿಲ್ಡರ್ಸ್ ಸೇರಿದಂತೆ ಹಲವು ರಿಯಲ್ ಎಸ್ಟೇಟ್ ಸಂಸ್ಥೆಗಳ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ರಾಜಕೀಯ ವಲಯದಲ್ಲಿ ಚರ್ಚೆ : ಈ ದಾಳಿ ಆಮ್ ಆದ್ಮಿ ಪಕ್ಷಕ್ಕೆ ಸಮೀಪವಾಗಿರುವ ವ್ಯಕ್ತಿಗಳ ಸ್ಥಳಗಳಲ್ಲಿ ನಡೆದಿರುವುದರಿಂದ ಪಂಜಾಬ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆರೋಪಗಳನ್ನು ತೀವ್ರಗೊಳಿಸುತ್ತಿದ್ದರೆ, ಇನ್ನೊಂದೆಡೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಆಪ್ ನಾಯಕರು ಪ್ರತಿಕ್ರಿಯಿಸಿದ್ದಾರೆ.