ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯು ಕೇವಲ ಚುನಾವಣೆಗಾಗಿ ಮಾಡಿಕೊಂಡಿರುವ ತಂತ್ರವಾಗಿದೆ. ಇದು ಗೃಹಲಕ್ಷ್ಮಿಯಲ್ಲ, ಬದಲಾಗಿ ‘ಚುನಾವಣಾ ಲಕ್ಷ್ಮಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಗ್ಯಾರಂಟಿ ಹೆಸರಿನಲ್ಲಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿಗಳ ಸಹಿತ ಇಡೀ ಸಚಿವ ಸಂಪುಟ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಬೀಡು ಬಿಟ್ಟು ಆಡಳಿತಯಂತ್ರ ದುರುಪಯೋಗಪಡಿಸಿಕೊಂಡು ಚುನಾವಣೆ ನಡೆಸಿದೆ. ನಾಲ್ಕೈದು ತಿಂಗಳಿನಿಂದ ಹಣ ನೀಡದೆ ಬಾಕಿ ಉಳಿಸಿಕೊಂಡು, ಚುನಾವಣೆ ಹತ್ತಿರ ಬಂದಾಗ ಮೂರು ತಿಂಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವುದು ಇವರ ರಾಜಕೀಯ ಗಿಮಿಕ್,” ಎಂದು ಆರೋಪಿಸಿದರು.
“ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬಂದಾಗಲೂ ಕಾಂಗ್ರೆಸ್ ಇದೇ ರೀತಿ ಮಾಡುತ್ತದೆ. ಹಣವನ್ನು ಬಾಕಿ ಇರಿಸಿಕೊಂಡು ಮತದಾನದ ಮುನ್ನಾ ದಿನಗಳಲ್ಲಿ ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ” ಎಂದು ವಿಜಯೇಂದ್ರ ಹೇಳಿದರು.
ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಸರ್ಕಾರವೂ ಇಂತಹದ್ದೇ ‘ಉಚಿತ’ ಯೋಜನೆಗಳನ್ನು ಘೋಷಿಸಿ ಇಂದು ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಅದೇ ಹಾದಿಯಲ್ಲಿದೆ. ಚುನಾವಣಾ ಲಾಭಕ್ಕಾಗಿ ಇಂತಹ ಯೋಜನೆಗಳನ್ನು ಬಳಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಲ್ಲ. ಇಂತಹ ಹತಾಶೆ ಕ್ರಮಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ ಇತರರಿದ್ದರು.






















