ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದಿಂದ ಬಂದು ಅತಿ ಕಡಿಮೆ ಅವಧಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಸಾಧನೆಗೆ ಈಗ ಹೊಸ ಸೇರ್ಪಡೆಯಾಗಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಟ ವಿಜಯ್, 43 ವರ್ಷಗಳ ಹಿಂದೆ ತೆಲುಗು ಸೂಪರ್‌ಸ್ಟಾರ್ ಎನ್.ಟಿ. ರಾಮರಾವ್ (ಎನ್‌ಟಿಆರ್) ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೊದಲಿಗರು ಎನ್‌ಟಿಆರ್: 9 ತಿಂಗಳಲ್ಲಿ ಅಧಿಕಾರ 1982ರ ಮಾರ್ಚ್‌ನಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಸಿಡಿದೆದ್ದ ಎನ್‌ಟಿಆರ್, ಹೈದರಾಬಾದ್‌ನಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಥಾಪಿಸಿದರು. ಅಚ್ಚರಿಯೆಂದರೆ ಪಕ್ಷ ಸ್ಥಾಪಿಸಿದ ಕೇವಲ 9 ತಿಂಗಳಲ್ಲಿ, ಅಂದರೆ 1983ರ ಜನವರಿಯ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 202 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದರು. ಇದು ಭಾರತೀಯ ರಾಜಕೀಯದಲ್ಲಿ ಅಂದು ಸೃಷ್ಟಿಯಾದ ಮಹಾನ್ ಸಂಚಲನ.
ಇತಿಹಾಸ ಮರುಕಳಿಸಿದ ವಿಜಯ್ ಅಭಿಯಾನ: ಈಗ 43 ವರ್ಷಗಳ ನಂತರ, ನಟ ವಿಜಯ್ ಅದೇ ವೇಗದಲ್ಲಿ ರಾಜಕೀಯ ಭೂಪಟದಲ್ಲಿ ಮಿಂಚಿದ್ದಾರೆ. ಫೆಬ್ರವರಿ 2024 ರಲ್ಲಿ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ಘೋಷಿಸಿ, ಸೆಪ್ಟೆಂಬರ್‌ನಲ್ಲಿ ಅಧಿಕೃತ ನೋಂದಣಿ ಪಡೆದ ವಿಜಯ್, ಕೇವಲ ಎರಡೇ ವರ್ಷಗಳಲ್ಲಿ ಅಧಿಕಾರಕ್ಕೆ ಹತ್ತಿರವಾಗಿದ್ದಾರೆ. ಎನ್‌ಟಿಆರ್‌ರಂತೆಯೇ ವಿಜಯ್ ಕೂಡ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ರಾಜ್ಯಾದ್ಯಂತ ಸಂಚರಿಸಿ, ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಮತ ರೂಪಿಸುವಲ್ಲಿ ಯಶಸ್ವಿಯಾದರು.
ವಿಶೇಷ ಕ್ಲಬ್ ಸೇರಿದ ನಟ-ರಾಜಕಾರಣಿ: ದಕ್ಷಿಣ ಭಾರತದಲ್ಲಿ ಎಂ.ಜಿ. ರಾಮಚಂದ್ರನ್, ಚಿರಂಜೀವಿ, ಕಮಲ್ ಹಾಸನ್, ವಿಜಯಕಾಂತ್ ಮತ್ತು ಪವನ್ ಕಲ್ಯಾಣ್ ಅವರಂತಹ ಘಟಾನುಘಟಿಗಳು ರಾಜಕೀಯಕ್ಕೆ ಬಂದರೂ, ಎನ್‌ಟಿಆರ್ ಮಾದರಿಯ ಇಂತಹ ತ್ವರಿತ ಮತ್ತು ದೊಡ್ಡ ಮಟ್ಟದ ಗೆಲುವು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ 51 ವರ್ಷದ ವಿಜಯ್, ಪ್ರಾದೇಶಿಕ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದು, ಎನ್‌ಟಿಆರ್ ನಂತರದ ಅತಿ ವೇಗದ ಯಶಸ್ವಿ ನಟ-ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ನಟ, ರಾಜಕಾರಣಿ ವಿಜಯ್, ಈ ಭರ್ಜರಿ ಗೆಲುವು ಕೇವಲ ವ್ಯಕ್ತಿಯ ಗೆಲುವಲ್ಲ, ಅದು ತಮಿಳುನಾಡಿನ ರಾಜಕೀಯ ಸಂಸ್ಕೃತಿಯಲ್ಲಿ ಸಂಭವಿಸಿದ ದೊಡ್ಡ ಸ್ಥಿತ್ಯಂತರದ ಸಂಕೇತವಾಗಿದೆ ಎನ್ನಲಾಗುತ್ತಿದೆ.























