ರಾಜಕೀಯ ಎಂದರೆ ವಂಶಪಾರಂಪರ್ಯ ಅಧಿಕಾರ, ಹಣಬಲ ಮತ್ತು ತೋಳ್ಬಲದ ಆಟ ಎಂಬ ಕಾಲದಲ್ಲಿ, ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಹೊಸ ಇತಿಹಾಸ ಬರೆದಿದೆ.
ತನ್ನ ಮನೆಯಲ್ಲಿ ಕೆಲಸ ಮಾಡುವವರನ್ನು ಹಾಗೂ ಬೀದಿಯಲ್ಲಿ ಆಟೋ ಓಡಿಸುವವರನ್ನು ವಿಧಾನಸಭೆಗೆ ಕಳುಹಿಸುವ ಮೂಲಕ ವಿಜಯ್ “ಸಾಮಾನ್ಯನಿಗೂ ಅಧಿಕಾರ” ಎಂಬ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ.
ಡ್ರೈವರ್ ಮಗ ಈಗ ಶಾಸಕ: ವಿಜಯ್ ಅವರ ಬಳಿ ಕಳೆದ 30 ವರ್ಷಗಳಿಂದ ನಂಬಿಕಸ್ತ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್, ಚೆನ್ನೈನ ವಿರುಗಂಬಕ್ಕಂ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ವಿಜಯ್ ಅವರೇ ಈ ಯುವಕನ ಶಿಕ್ಷಣದ ಜವಾಬ್ದಾರಿ ಹೊತ್ತು ಓದಿಸಿದ್ದರು. ಇಂದು ಸಾಮಾನ್ಯ ಮನೆತನದ ಯುವಕ ಶಾಸಕನಾಗಿ ಆಯ್ಕೆಯಾಗಿರುವುದು ಇಡೀ ದೇಶದ ಗಮನ ಸೆಳೆದಿದೆ.
ಜಯಕುಮಾರ್‌ಗೆ ಶಾಕ್ ನೀಡಿದ ಆಟೋ ಚಾಲಕ: ರಾಯಪುರಂ ಕ್ಷೇತ್ರದಲ್ಲಿ ನಡೆದದ್ದು ಅಸಲಿ ಪವಾಡ. ಐದು ಬಾರಿ ಶಾಸಕರಾಗಿದ್ದ ಎಐಎಡಿಎಂಕೆಯ ದಿಗ್ಗಜ ನಾಯಕ ಡಿ. ಜಯಕುಮಾರ್ ಅವರನ್ನು ಸಾಮಾನ್ಯ ಆಟೋ ಚಾಲಕ ವಿಜಯ್ ಧಮು ಸೋಲಿಸಿದ್ದಾರೆ. ಆಟೋ ಸ್ಟ್ಯಾಂಡ್‌ನಿಂದ ವಿಧಾನಸಭೆಯ ಮೆಟ್ಟಿಲೇರಿರುವ ಧಮು ಅವರ ಗೆಲುವು ಟಿವಿಕೆ ಪಕ್ಷದ ತಳಮಟ್ಟದ ಬಲಕ್ಕೆ ಸಾಕ್ಷಿಯಾಗಿದೆ.
ಗೆದ್ದ ಕನ್ನಡಿಗ: ಇನ್ನು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವೆಂದರೆ, ಮೆಟ್ಟುಪಾಳಯಂ ಕ್ಷೇತ್ರದಿಂದ ಗೆದ್ದಿರುವ ಸುನಿಲ್ ಆನಂದ್ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆಯವರು. ಅಲ್ಲಿ ನೆಲಸಿ ವಿಜಯ್ ಅಭಿಮಾನಿ ಸಂಘದ ಮೂಲಕ ಸೇವೆ ಸಲ್ಲಿಸುತ್ತಿದ್ದ ಸುನಿಲ್ ಆನಂದ್ ಅವರ ಈ ಗೆಲುವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ ಕುಟುಂಬ ರಾಜಕಾರಣಕ್ಕೆ ಎಂಡ್ ಕಾರ್ಡ್ ಹಾಕಿ ಸಾಮಾನ್ಯ ಜನರಿಗೆ ಪಟ್ಟ ಕಟ್ಟಿರುವ ವಿಜಯ್ ಅವರ ಈ ನಡೆ ಭಾರತೀಯ ಪ್ರಜಾಪ್ರಭುತ್ವದ ಅಸಲಿ ಗೆಲುವು ಎಂದು ಬಣ್ಣಿಸಲಾಗುತ್ತಿದೆ.





















