Home Advertisement
Home ಸಿನಿ ಮಿಲ್ಸ್ ಹೆಚ್ಚುವರಿ ಹಣದ ಬೇಡಿಕೆ?: ನಟಿ ರಜಿನಿ ವಿರುದ್ಧ ಚಿತ್ರತಂಡದಿಂದ ʻಫಿಲ್ಮ್ ಚೇಂಬರ್‌ಗೆʼ ಗಂಭೀರ ಆರೋಪ!

ಹೆಚ್ಚುವರಿ ಹಣದ ಬೇಡಿಕೆ?: ನಟಿ ರಜಿನಿ ವಿರುದ್ಧ ಚಿತ್ರತಂಡದಿಂದ ʻಫಿಲ್ಮ್ ಚೇಂಬರ್‌ಗೆʼ ಗಂಭೀರ ಆರೋಪ!

0
58

ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ನಟಿ ರಜಿನಿಗೆ ಸಂಕಷ್ಟ ಎದುರಾಗಿದೆ. ಸದ್ಯ ಜೋಡಿ ನಂ.01 ರಿಯಾಲಿಟಿ ಶೋ ಒಂದರಲ್ಲಿ ತಮ್ಮ ಪತಿಯೊಂದಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಹೌದು ರಜಿನಿ ತಾವು ನಾಯಕಿಯಾಗಿ ನಟಿಸಿರುವ ‘ಅಸುರನ ಕೈಯಲ್ಲಿ ಪಾರಿಜಾತ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ವಿಘ್ನೇಶ್ ಹಾಗೂ ನಿರ್ಮಾಪಕ ಕಾರ್ತಿಕ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್ ಚೇಂಬರ್) ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ಸಿನಿಮಾ ಇದೇ ಮೇ 22ರಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಪ್ರಮೋಷನ್ ಕಾರ್ಯಗಳು ಭರದಿಂದ ಸಾಗಬೇಕಿದೆ. ಆದ್ರೆ ನಟಿ ರಜಿನಿ ಪ್ರಚಾರಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂದು ಚಿತ್ರತಂಡ ದೂರಿದೆ. ನಿರ್ದೇಶಕ ವಿಘ್ನೇಶ್ ಪ್ರಕಾರ, ರಜಿನಿ ಈಗಾಗಲೇ ಒಪ್ಪಿಕೊಂಡ ಸಂಭಾವನೆಯನ್ನು ಪಡೆದಿದ್ದಾರೆ. ಆದ್ರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ರೀಲ್ಸ್ ಹಂಚಿಕೊಳ್ಳಲು ಮತ್ತು ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಚ್ಚುವರಿ ಹಣದ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಾಗ ಜನ್ಮದಿನದ ನೆಪ ಹೇಳಿ ಬಾರದ ನಟಿ, ನಂತರದ ದಿನಗಳಲ್ಲಿ ಸೀರಿಯಲ್ ಶೂಟಿಂಗ್ ನೆಪವೊಡ್ಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರತಂಡದ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್‌ನ್ನ ಬ್ಲಾಕ್ ಮಾಡಿದ್ದಾರೆ ಎಂದು ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಯಾವುದೇ ಒಂದು ಸಿನಿಮಾ ಯಶಸ್ವಿಯಾಗಲು ಪ್ರಚಾರ ಮುಖ್ಯವಾಗಿದ್ದು, ನಟಿಯ ಈ ವರ್ತನೆಯಿಂದ ಚಿತ್ರಕ್ಕೆ ತೊಂದರೆಯಾಗುತ್ತಿದೆ ಎಂದು ನಿರ್ಮಾಪಕ ಕಾರ್ತಿಕ್ ಅಳಲು ತೋಡಿಕೊಂಡಿದ್ದಾರೆ.

ದೂರು ಸ್ವೀಕರಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷರು, ಇಂತಹ ಘಟನೆಗಳು ಮರುಕಳಿಸದಂತೆ ಸಿನಿಮಾ ಆರಂಭಕ್ಕೂ ಮುನ್ನವೇ ಕಲಾವಿದರ ಜೊತೆ ಪ್ರಚಾರದ ಕುರಿತು ಸ್ಪಷ್ಟವಾದ ಒಪ್ಪಂದ ಮಾಡಿಕೊಳ್ಳುವಂತೆ ನಿರ್ಮಾಪಕರಿಗೆ ಕಿವಿಮಾತು ಹೇಳಿದ್ದಾರೆ. ಕಲಾವಿದರು ಮತ್ತು ನಿರ್ಮಾಪಕರ ನಡುವಿನ ಈ ಸಂಘರ್ಷ ಈಗ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.