ವಿಜಯನಗರ: ಚಿಕ್ಕಮಗಳೂರಿನಲ್ಲಿ ನಡೆದ ಅಂಚೆ ಮತ ಮರುಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳ ಅಂಚೆ ಮತಪತ್ರಗಳಲ್ಲಿ ತಿದ್ದುಪಡಿ (ಟ್ಯಾಂಪರಿಂಗ್) ನಡೆದಿದೆ ಎಂದು ಆರೋಪಿಸಿದ್ದಾರೆ. ಮತ ಎಣಿಕೆ ವೇಳೆ ಅಧಿಕಾರಿಗಳು ಸಹಿ ಮಾಡಿದ್ದರೂ, ನಂತರ ಸಂಚು ರೂಪಿಸಿ ಅಂಚೆ ಮತಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ನಮ್ಮ ಶಾಸಕನಿಗೆ ಬಂದ ಮತಗಳನ್ನು ಉದ್ದೇಶಪೂರ್ವಕವಾಗಿ ತಿದ್ದಲಾಗಿದೆ. ಇದು ದೇಶದ ಗೌರವಕ್ಕೂ ಧಕ್ಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದ್ದು, ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ರೀತಿಯ ಟ್ಯಾಂಪರಿಂಗ್ ಘಟನೆ ಜಯನಗರದಲ್ಲಿಯೂ ನಡೆದಿರುವುದಾಗಿ ಆರೋಪಿಸಿದ್ದು, ಈ ಎಲ್ಲಾ ಪ್ರಕರಣಗಳನ್ನು ಕಾನೂನು ಪ್ರಕಾರ ತನಿಖೆ ಮಾಡಬೇಕು ಎಂದು ತಿಳಿಸಿದ್ದಾರೆ.





















