ಮಂಡ್ಯ: ಪಾಂಡವಪುರ ತಾಲೂಕಿನ ಕೆಆರ್‌ಎಸ್ ಹಿನ್ನೀರಿನ ಗಿರಿಯಾರಹಳ್ಳಿ ಬ್ಯಾಕ್‌ವಾಟರ್ ಪ್ರದೇಶದಲ್ಲಿ ಖಾಸಗಿ ರೆಸಾರ್ಟ್ ಮೂಲಕ ಬೋಟಿಂಗ್‌ಗೆ ತೆರಳಿದ್ದ ಕುಟುಂಬದ ಮೇಲೆ ಭಾರೀ ದುರಂತ ಸಂಭವಿಸಿದೆ. ಬಿರುಗಾಳಿಗೆ ಸಿಲುಕಿದ ಬೋಟ್ ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು, ಅಳಿಯ ಹಾಗೂ ಮೊಮ್ಮಗು ಸೇರಿ ಮೂವರು ಪಾರಾಗಿದ್ದಾರೆ.
ಮೃತರನ್ನು ವಿ. ಮಂಜುನಾಥ (72) ಮತ್ತು ಅವರ ಪತ್ನಿ ಜಸ್ವಿ (70) ಎಂದು ಗುರುತಿಸಲಾಗಿದೆ. ಕೊಚ್ಚಿ ಮೂಲದ ಈ ಕುಟುಂಬಸ್ಥರು ಖಾಸಗಿ ರೆಸಾರ್ಟ್‌ನಿಂದ ಬೋಟ್ ಮೂಲಕ ಹಿನ್ನೀರಿನಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಾಳಿ ಹೆಚ್ಚಾಗಿ ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ತಿಳಿದ ಕೂಡಲೇ ರೆಸಾರ್ಟ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗಳು ಶ್ವೇತಾ, ಅಳಿಯ ಜಸ್ವಿನ್ ಹಾಗೂ ಮೊಮ್ಮಗು ಅಯ್ಯನ್ (8)ರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಮೃತದೇಹಗಳನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದೇ ವೇಳೆ ಗಿರಿಯಾರಹಳ್ಳಿ ಪ್ರದೇಶದಲ್ಲೇ ಮೀನಿಗೆ ಆಹಾರ ಹಾಕಲು ತೆರಳಿದ್ದ ಮಧು (28), ಈಶ್ವರ್-ಪಾರ್ವತಮ್ಮ ಪುತ್ರ, ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಹುಡುಕಾಟ ಕಾರ್ಯ ಮುಂದುವರಿದಿದೆ.
ಬೋಟಿಂಗ್ ವೇಳೆ ಸುರಕ್ಷತಾ ಕ್ರಮಗಳ ಕೊರತೆ, ಹವಾಮಾನ ಎಚ್ಚರಿಕೆಗಳ ನಿರ್ಲಕ್ಷ್ಯ ಹಾಗೂ ಜೀವ ರಕ್ಷಕ ಸಾಧನಗಳ ಲಭ್ಯತೆ ಇಲ್ಲದಿರುವುದು ಪ್ರಶ್ನಾರ್ಥಕವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.























