Home Advertisement
Home ನಮ್ಮ ಜಿಲ್ಲೆ ಧಾರವಾಡ ಸುಳ್ಳು ಗಾಂಜಾ ಕೇಸಿಗೆ ಬೇಸತ್ತು ಯುವಕ ಆತ್ಮಹತ್ಯೆ?

ಸುಳ್ಳು ಗಾಂಜಾ ಕೇಸಿಗೆ ಬೇಸತ್ತು ಯುವಕ ಆತ್ಮಹತ್ಯೆ?

0
79

ಧಾರವಾಡ: ಒಂದೆಡೆ ಕಿತ್ತು ತಿನ್ನುವ ಬಡತನ…. ಇನ್ನೊಂದೆಡೆ ತಂದೆಯ ಪ್ರೀತಿ ಎಂದರೆ ಏನಂತ ಅರಿಯದೇ ತಾಯಿಯ ಪ್ರೀತಿಯಲ್ಲಿ ಬೆಳೆದ ಕರಳು… ಓದಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕನಸು ಕಟ್ಟಿಕೊಂಡು ವಿದ್ಯಾಕಾಶಿಗೆ ಬಂದ ಬಡ ಜೀವ ಇಂದು ಪೊಲೀಸರ ಪಿಪಾಸುತನಕ್ಕೆ ಇಹಲೋಕ ತ್ಯಜಿಸಿದೆ.

ಹತ್ತಾರು ಕನಸು ಹೊತ್ತು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಿಂದ ಧಾರವಾಡದ ಕಾಲೇಜೊಂದರಲ್ಲಿ ಬಿಎಸ್‌ಸಿ ಪದವಿ ಕಲಿಯಲು ಬಂದಿದ್ದ ಆದಿತ್ಯ ಮ್ಯಾಗೇರಿ ಮಂಗಳವಾರ ಪೊಲೀಸರ ಕಿರಿಕಿರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಏನಿದು ಘಟನೆ…?: ಅವಳಿ ನಗರಗಳನ್ನು ಗಾಂಜಾ ಮುಕ್ತ ಮಾಡುವ ಉದ್ದೇಶದಿಂದ ಪ್ರತಿಯೊಂದು ಠಾಣೆಗಳಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಇತ್ತೀಚೆಗೆ ಖಡಕ್ ವಾರ್ನಿಂಗ್ ನೀಡಿ ಪ್ರತಿಯೊಬ್ಬ ಪೆಡ್ಲರ್ ಮತ್ತು ಸೇವನೆ ಮಾಡುವವರನ್ನು ವಶಕ್ಕೆ ಪಡೆದು ಅವರಿಗೆ ತಿಳವಳಿಕೆ ನೀಡಬೇಕು ಎಂದು ತಾಕೀತು ಮಾಡಿದ್ದರು. ಆದರೆ, ಇದನ್ನು ದುರಾಸೆಗೆ ಬಳಕೆ ಮಾಡಿಕೊಂಡಿರುವ ಕೆಲವು ಪೊಲೀಸರು ಯಾವುದೇ ಚಟ ಮಾಡದೇ ಇದ್ದ ಯುವಕರಿದ್ದರೂ ಅವರನ್ನು ಠಾಣೆಗೆ ಎತ್ತಾಕಿಕೊಂಡು ಬಂದು ಹೆದರಿಸಿ-ಬೆದರಿಸಿ ಹಣ ಪೀಕುತ್ತಿದ್ದಾರೆ ಎಂದು ಕೇಳಿಬಂದಿದೆ.

ಇದೇ ರೀತಿಯಲ್ಲಿ ಕಳೆದ ಶನಿವಾರ ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿಯ ಗಿರಿನಗರದಲ್ಲಿ ರೇಡ್ ಮಾಡಿದ ಪೊಲೀಸ್ ಸಿಬ್ಬಂದಿ ಒಟ್ಟು 9 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಅದರಲ್ಲಿ ಆದಿತ್ಯ ಮ್ಯಾಗೇರಿ ಸಹ ಒಬ್ಬ. ಆದರೆ, ಎಲ್ಲರ ತಪಾಸಣೆ ನಡೆಸಿದ್ದಲ್ಲದೇ ಗಾಂಜಾ ಸೇವನೆ ಮಾಡಿದ ಪರೀಕ್ಷೆಯನ್ನೂ ಮಾಡಿಸಿದ್ದಾರೆ. ಇದರಲ್ಲಿ ಆದಿತ್ಯ ಯಾವುದೇ ರೀತಿಯಲ್ಲಿ ಗಾಂಜಾ ಸೇವನೆ ಮಾಡಿಲ್ಲ ಎಂದು ನೆಗೆಟಿವ್ ವರದಿ ಸಹ ಬಂದಿದೆ.

ಆದರೆ, ಇದನ್ನೇ ದಾಳವಾಗಿ ಬಳಕೆ ಮಾಡಿಕೊಂಡು ಪೊಲೀಸರು 2 ಸಾವಿರ ರೂ.ಗಳನ್ನು ನೀಡಿದರೆ ಮಾತ್ರ ನಿನ್ನನ್ನು ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ ಬೇರೆ ಪ್ರಕರಣದಲ್ಲಿ ನಿನ್ನ ಹೆಸರು ಹಾಕಿ ಜೀವನವನ್ನೇ ಬರ್ಬಾದ್ ಮಾಡಿಬಿಡುತ್ತೇವೆ ಎಂದೆಲ್ಲ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಆದಿತ್ಯ ತನ್ನ ತಾಯಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರವಾಗಿ ಹೇಳಿದ್ದಲ್ಲದೇ ಹಣ ನೀಡುವಂತೆ ಕೇಳಿದ್ದಾನೆ. ಜೊತೆಗೆ ತಾಯಿ ಹಣ ನೀಡಿದ ತಕ್ಷಣ ಪೊಲೀಸರಿಗೂ ಕೊಟ್ಟಿದ್ದಾಗಿದೆಯಂತೆ.

ಮುಗಿಯದ ಪಿಪಾಸುತನ: ಒಂದೊಮ್ಮೆ ಹಣ ಕೊಟ್ಟಿದ್ದಾನೆ ಎಂದಾಕ್ಷಣ ಈತನನ್ನು ಎಷ್ಟು ಪೀಕಿದರೂ ನಡೆಯುತ್ತದೆ ಎಂದರಿತ ಪೊಲೀಸರು, ನಿರಂತರ ಆತನಿಗೆ ಕರೆ ಮಾಡಿ ಹಣದ ಬೇಡಿಕೆ ಇಡುತ್ತಲೇ ಹೋಗಿದ್ದಾರೆ. ಆದರೆ, ಬಡಪಾಯಿ ಜೀವ ತಾಯಿಯ ಬಳಿಯಾದರೂ ಎಷ್ಟು ಕೇಳುವುದು. ಮೊದಲೇ ಕಷ್ಟಪಟ್ಟು ದುಡಿದು ವಿದ್ಯಾಭ್ಯಾಸ ಮಾಡಿಸುತ್ತಿದ್ದಾಳೆ. ಜೊತೆಗೆ ಸಹೋದರಿ ಬೇರೆ ಇದ್ದಾಳೆ. ಆಕೆಯದ್ದು ನೋಡಬೇಕು ಎಂದು ಮನನೊಂದ ಆದಿತ್ಯ ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ನೇಣಿಗೆ ಶರಣಾಗಿದ್ದಾನೆ.

ಯಾರದ್ದೋ ತಪ್ಪಿಗೆ ಮತ್ತಾರಿಗೋ ಶಿಕ್ಷೆ: ಸಾಮಾನ್ಯವಾಗಿ ಸ್ನೇಹಿತರು ಎಂದಾಕ್ಷಣ ಕೆಟ್ಟವರೂ ಇರುತ್ತಾರೆ ಒಳ್ಳೆಯವರೂ ಇರುತ್ತಾರೆ. ಆದರೆ, ಸ್ನೇಹಿತರೊಂದಿಗೆ ನಿಂತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಆತನ ಸ್ನೇಹಿತರೊಂದಿಗೆ ಆದಿತ್ಯನನ್ನೂ ಕರೆದುಕೊಂಡು ಹೋಗಿದ್ದಾರೆ. ಅದೇ ದಿನ ಸುಮಾರು 40 ಯುವಕರನ್ನು ವಶಕ್ಕೆ ಪಡೆದು ಪ್ರತಿಯೊಬ್ಬರ ಮೆಡಿಕಲ್ ತಪಾಸಣೆ ನಡೆಸಿದ್ದಾರೆ. ಆದರೆ, ಇದರಲ್ಲಿ ಆದಿತ್ಯ ರಿಪೋರ್ಟ್ ನೆಗೆಟಿವ್ ಬಂದಿದೆ.

ಹೀಗೆ ಬಿಟ್ಟರೆ ನಮಗೇನು ಲಾಭ ಎಂದರಿತ ಪೊಲೀಸರು ಮೊದಲು 10 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಆತ ಬಡತನದಿಂದ ಬಂದಾತ ಎಂದು ಗೊತ್ತಾದ ತಕ್ಷಣ ಕನಿಷ್ಠ 2 ಸಾವಿರ ರೂ.ಗಳನ್ನಾದರೂ ನೀಡುವ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೇ ಆ ಹಣವನ್ನು ಫೋನ್ ಪೇ ಸಹ ಮಾಡಿಸಿಕೊಂಡಿದ್ದಾರೆ. ಮರ್ಯಾದೆಗೆ ಅಂಜಿದ ಬಡ ಜೀವ ಕೊನೆಗೆ ಜೀವವನ್ನೇ ತ್ಯಾಗ ಮಾಡಿದ್ದಾನೆ.

ಒಂದು ಠಾಣೆಯದ್ದಲ್ಲ: ಇದು ಕೇವಲ ಒಂದು ಪೊಲೀಸ್ ಠಾಣೆ ವಿಚಾರವಲ್ಲ. ಬದಲಾಗಿ ಪ್ರತಿಯೊಂದು ಠಾಣೆಯಲ್ಲಿ ನಿತ್ಯ ಹತ್ತಾರು ಯುವಕರನ್ನು ಗಾಂಜಾ ಪ್ರಕರಣದಲ್ಲಿಯೇ ಠಾಣೆಗೆ ಕರೆತಂದು ತಪಾಸಣೆ ನಡೆಸುವುದರ ಜೊತೆಗೆ ಇದೇ ರೀತಿಯಲ್ಲಿ ಹಣ ಪೀಕುವ ತಂತ್ರಗಾರಿಕೆಯನ್ನೂ ಪ್ರಾರಂಭಿಸಿದ್ದಾರೆ. ಆದರೆ, ಇದೆಲ್ಲ ಗೊತ್ತಿದ್ದರೂ ಪೊಲೀಸ್ ಆಯುಕ್ತರು ಮಾತ್ರ ಸುಮ್ಮನೆ ಕುಳಿತಿರುವುದು ನೋವಿನ ಸಂಗತಿ.

ಇದ್ದೊಬ್ಬ ಮಗ ಇಲ್ಲವಾದ: ಶನಿವಾರ ಕರೆ ಮಾಡಿ ನಾನು ಏನೂ ತಪ್ಪು ಮಾಡಿಲ್ಲ ಎಂದರೂ ಪೊಲೀಸರು ಗಾಂಜಾ ಪ್ರಕರಣದಲ್ಲಿ ಕರೆದುಕೊಂಡು ಹೋಗಿದ್ದಾರೆ ಅಮ್ಮ. ನನಗೆ ಹೇಗಾದರೂ ಮಾಡಿ 2 ಸಾವಿರ ಹಾಕು, ಅಂದರೆ ಮಾತ್ರ ಬಿಡುತ್ತಾರೆ ಎಂದ. ತಕ್ಷಣ ಫೋನ್ ಸ್ವಿಚ್ ಆಫ್ ಆಯ್ತು. ಮರುದಿನ ಸಂಜೆ 5ರ ಸುಮಾರಿಗೆ ಮರಳಿ ಫೋನ್ ಪ್ರಾರಂಭವಾಯ್ತು ಸರ್. ಆಗ ದುಡ್ಡು ಹಾಕಿದ್ದೆ. ಆದರೆ, ಮತ್ತೆ ಆತನ ಫೋನ್‌ನಿಂದ ಕರೆ ಬಂದ್ದದ್ದು ನೇಣು ಬಿಗಿದುಕೊಂಡಿದ್ದಾನೆ ಎಂದು. 2 ಸಾವಿರ ಬೇಡಿಕೆ ಇಟ್ಟವರೇ ನನ್ನ ಮಗನ ಸಾವಿಗೆ ಕಾರಣ ನೋಡಿ ಎಂದು ತಾಯಿ ಕವಿತಾ ತಮ್ಮ ರೋದನೆ ವ್ಯಕ್ತಪಡಿಸಿದರು.