ಕುಂದಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸಚಿವೆಯ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಅವರು, ಪೂಜೆ ಸಲ್ಲಿಸಿ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದರು. ಬಳಿಕ ದೇವಸ್ಥಾನದ ಒಳಭಾಗವನ್ನು ವೀಕ್ಷಿಸಿ, ಅಲ್ಲಿನ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ದೇವಾಲಯದ ಮುಂಭಾಗದಲ್ಲಿರುವ ಗರುಡಗಂಭದ ಬಳಿ ಅರ್ಚಕರೊಂದಿಗೆ ಅವರು ಫೋಟೋ ತೆಗೆಯಿಸಿಕೊಂಡರು. ಈ ವೇಳೆ ಭಕ್ತರು ಸಚಿವೆಯ ಭೇಟಿಯನ್ನು ಕುತೂಹಲದಿಂದ ಗಮನಿಸಿದರು. ನಂತರ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕ್ಷೇತ್ರದ ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ ಉಪಸ್ಥಿತರಿದ್ದರು.























