Home Advertisement
Home ಸಿನಿ ಮಿಲ್ಸ್ ಪ್ರೀತಿಯ ನಾಟಕ, 9 ಕೋಟಿ ವಂಚನೆ: ಟಾಲಿವುಡ್ ನಟಿ ಆಶು ರೆಡ್ಡಿ ವಿರುದ್ಧ ದೂರು!

ಪ್ರೀತಿಯ ನಾಟಕ, 9 ಕೋಟಿ ವಂಚನೆ: ಟಾಲಿವುಡ್ ನಟಿ ಆಶು ರೆಡ್ಡಿ ವಿರುದ್ಧ ದೂರು!

0
49

ತೆಲುಗು ಬಿಗ್‌ಬಾಸ್ ಖ್ಯಾತಿಯ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಆಶು ರೆಡ್ಡಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ನೋಡಲು ಬಹುತೇಕ ನಟಿ ಸಮಂತಾರಂತೆಯೇ ಕಾಣುವ ಆಶು ರೆಡ್ಡಿ, ಮದುವೆಯಾಗುವುದಾಗಿ ನಂಬಿಸಿ ಲಂಡನ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಸೆಂಟ್ರಲ್ ಕ್ರೈಮ್ ಸ್ಟೇಷನ್  ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, 2018ರಲ್ಲಿ ಸತ್ಯನಾರಾಯಣ ಅವರ ಪುತ್ರ, ಲಂಡನ್‌ನಲ್ಲಿರುವ ಧರ್ಮೇಂದ್ರ ಎಂಬಾತನಿಗೆ ಆಶು ರೆಡ್ಡಿ ಪರಿಚಯವಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ, ಆತನನ್ನು ಮದುವೆಯಾಗುವುದಾಗಿ ಆಶು ಭರವಸೆ ನೀಡಿದ್ದರು. ಇದೇ ನಂಬಿಕೆಯ ಮೇಲೆ 2018 ರಿಂದ 2025ರವರೆಗೆ ಧರ್ಮೇಂದ್ರನಿಂದ ಬರೋಬ್ಬರಿ 9.35 ಕೋಟಿ ರೂಪಾಯಿಗಳನ್ನು ಆಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಹಣದಿಂದ ಆಶು ರೆಡ್ಡಿ ಐಷಾರಾಮಿ ಕಾರುಗಳು, 5 ಕೆಜಿ ಚಿನ್ನಾಭರಣ ಹಾಗೂ ಹೈದರಾಬಾದ್‌ನ ದುಬಾರಿ ಪ್ರದೇಶಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಿ ತಮ್ಮ ಹೆಸರಿನಲ್ಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆಶು ಅವರ ಸಹೋದರಿ ಕೂಡ 50 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆಗೆ ನಿರಾಕರಿಸಿದಾಗ ನಟಿ ಹೇಮಾ ಸಮ್ಮುಖದಲ್ಲಿ ಪಂಚಾಯಿತಿ ನಡೆದಿತ್ತು. ಆಗ 70 ಲಕ್ಷ ರೂ. ಹಿಂತಿರುಗಿಸಲು ಒಪ್ಪಿ ಚೆಕ್ ನೀಡಿದ್ದ ಆಶು, ನಂತರ ಆ ಚೆಕ್‌ಗಳನ್ನು ನಾಶಪಡಿಸಿ ಮೋಸ ಮಾಡಿದ್ದಾರೆ ಎಂದು ಧರ್ಮೇಂದ್ರ ಕುಟುಂಬ ಆರೋಪಿಸಿದೆ.

ಆದರೆ, ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಆಶು ರೆಡ್ಡಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. “ನನ್ನ ಬಗ್ಗೆ ಆಧಾರರಹಿತ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ” ಎಂದಿದ್ದಾರೆ. ಈ ಹಿಂದೆಯೂ ಡ್ರಗ್ಸ್ ಪ್ರಕರಣವೊಂದರಲ್ಲಿ ಇವರ ಹೆಸರು ಕೇಳಿಬಂದಿತ್ತು. ಇದೀಗ ವಂಚನೆ ಪ್ರಕರಣವನ್ನು ಪೊಲೀಸರು ಆರ್ಥಿಕ ಅಪರಾಧಗಳ ವಿಭಾಗಕ್ಕೆ  ವರ್ಗಾಯಿಸಿದ್ದು, ಎಫ್‌ಐಆರ್ ದಾಖಲಾಗಿದೆ.