ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಹುಚ್ಚು ಹೆಚ್ಚಾಗುತ್ತಲೇ ಹೊರಟಿದೆ. ಮೊಬೈಲ್ ಇಲ್ಲದೇ ಜಗತ್ತೇ ಇಲ್ಲ, ಮೊಬೈಲ್ ನಮ್ಮ ಜಗತ್ತು ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೀಳು ಶುರುವಾಗಿದೆ.
ಆದರೆ ಈ ಮೊಬೈಲ್ ಫೋನ್‌ಗಳು ಮಕ್ಕಳ ಪ್ರಾಣವನ್ನು ತೆಗೆಯುತ್ತಿವೆ ಅಂದರೆ ನೀವು ನಂಬಲೇಬೇಕು. ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಘಟನೆ ಇದಕ್ಕೆ ಅತ್ಯಂತ ತಾಜಾ ಉದಾಹರಣೆಯಾಗಿದೆ.
ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಗೀಳಿನ ಸಲುವಾಗಿ ಪೋಷಕರು ಬೈದಿದ್ದಕ್ಕೆ ಓರ್ವ ಅಪ್ರಾಪ್ತ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ.
ಸಮರ್ಥ ಪಟಿಕೆ(14) ಮೃತ ಪಟ್ಟಿರುವ ಬಾಲಕ. ಇತ ಹೆಚ್ಚಾಗಿ ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದು ಪಾಲಕರು ಬುದ್ಧಿ ಹೇಳಿದ್ದರೂ ಬಿಟ್ಟಿರಲಿಲ್ಲ.
ಗುರುವಾರ ರಾತ್ರಿ 9.30ಕ್ಕೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಆತನ ತಾಯಿ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಇದೇ ವಿಚಾರಕ್ಕೆ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.























