Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಮಧ್ಯರಾತ್ರಿ ಸಿಲಿಂಡರ್ ಸ್ಫೋಟ: ಹೋಟೆಲ್ ಬೆಂಕಿಗಾಹುತಿ – ಬಾಲಕ ಗಂಭೀರ ಗಾಯ

ಮಧ್ಯರಾತ್ರಿ ಸಿಲಿಂಡರ್ ಸ್ಫೋಟ: ಹೋಟೆಲ್ ಬೆಂಕಿಗಾಹುತಿ – ಬಾಲಕ ಗಂಭೀರ ಗಾಯ

0
162

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮಧ್ಯರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟ ದುರಂತ ಆತಂಕ ಸೃಷ್ಟಿಸಿದೆ. ಹೋಟೆಲ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ ಎರಡು ಅನಿಲ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಹೋಟೆಲ್ ಸಂಪೂರ್ಣ ಹೊತ್ತಿ ಉರಿದಿದೆ.

ಪಟ್ಟಣದ ಹೊರವಲಯದಲ್ಲಿರುವ ಮುಖ್ಯರಸ್ತೆಯ ತಿರುಮಲ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಅವಘಡದ ವೇಳೆ ಹೋಟೆಲ್‌ನಲ್ಲಿ ಇದ್ದ ಒಂಬತ್ತು ಮಂದಿಯಲ್ಲಿ ಎಂಟು ಮಂದಿ ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ 10 ವರ್ಷದ ಶ್ರೀನಿವಾಸ ಎಂಬ ಬಾಲಕನಿಗೆ ಬೆನ್ನು, ಕೈ ಮತ್ತು ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವನನ್ನು ಮೊದಲಿಗೆ ತೆಕ್ಕಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಿಲಿಂಡರ್ ಸ್ಫೋಟದ ಪರಿಣಾಮ ಭಾರೀ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ಜನರಲ್ಲಿ ಭೀತಿ ಉಂಟಾಯಿತು. ಕೆಲಕಾಲ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ಹೋಟೆಲ್ ಸ್ಥಳೀಯ ವ್ಯಾಪಾರಿ ಈರಣ್ಣ ಅವರಿಗೆ ಸೇರಿದದ್ದಾಗಿದ್ದು, ಬೆಂಕಿಯಿಂದ ಆಸ್ತಿಗೆ ಸಾಕಷ್ಟು ಹಾನಿಯಾಗಿದೆ. ನಷ್ಟದ ನಿಖರ ಅಂದಾಜು ಇನ್ನೂ ತಿಳಿದುಬಂದಿಲ್ಲ.

ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ದೊಡ್ಡ ಅನಾಹುತ ತಪ್ಪಿದಂತೆ ಸ್ಥಳೀಯರು ತಿಳಿಸಿದ್ದಾರೆ.