Home Advertisement
Home ನಮ್ಮ ಜಿಲ್ಲೆ ಯಾದಗಿರಿ ನಡು ರಸ್ತೆಯಲ್ಲೇ ಸಾರಿಗೆ ಇಲಾಖೆಯ ಬಸ್ ಜಪ್ತಿ!

ನಡು ರಸ್ತೆಯಲ್ಲೇ ಸಾರಿಗೆ ಇಲಾಖೆಯ ಬಸ್ ಜಪ್ತಿ!

0
1

ಯಾದಗಿರಿ: ನ್ಯಾಯಾಲಯದ ಆದೇಶದಂತೆ ಪರಿಹಾರ ಧನವನ್ನು ಪಾವತಿಸದ ದಾವಣಗೆರೆ ರಸ್ತೆ ಸಾರಿಗೆ ಇಲಾಖೆಯ ಬಸ್‌ನ್ನು ಮಂಗಳವಾರ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ಅವರ ಮುಂದೆ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿ ಹಾಜರುಪಡಿಸಿದರು.

ಕಲಬುರಗಿಯಿಂದ ದಾವಣಗೆರೆಗೆ ಹೊರಟಿದ್ದ ದಾವಣಗೆರೆ ಘಟಕದ ಕೆಎ 17 ಎಫ್-2089 ಕೆಎಸ್‌ಆರ್‌ಟಿಸಿ ಬಸ್‌ನ್ನು ಶಹಾಪುರ ಹೊಸ ನಿಲ್ದಾಣದಲ್ಲಿ ನ್ಯಾಯಾಲಯದ ಪ್ರೊಸೆಸ್ ಸರ್ವರ್ ಮಲ್ಲಪ್ಪ ಹಾಗೂ ಸಿಬ್ಬಂದಿ ಬಸ್ ಜಪ್ತಿ ಮಾಡಿದರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ತೆರಳುವಂತೆ ಅನುಕೂಲ ಮಾಡಿಕೊಟ್ಟರು.

ಪ್ರಕರಣದ ಹಿನ್ನಲೆ: ಕಳೆದ 2019 ಅಕ್ಟೋಬರ್ 29ರಂದು ಕಲಬುರಗಿಯಿಂದ ದಾವಣಗೆರೆಗೆ ಹೊರಟ್ಟಿದ್ದ ಬಸ್ ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಅಜ್ಜಿ ನೂರಜಾಬೇಗಂ ಹಾಗೂ ಮೊಮ್ಮಗ ಮುಜಾಮಿಲ್ (5) ಆಸ್ಪತ್ರೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದ್ದರಿಂದ ಮುಜಾಮಿಲ್ ಸ್ಥಳದಲ್ಲಿಯೇ ಮೃತಪಟ್ಟ. ನೂರಜಾಬೇಗಂ ಗಾಯಗೊಂಡರು. ಮೋಟಾರ ವಾಹನ ಅಪಘಾತ ಅಡಿಯಲ್ಲಿ ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ ಮೃತರ ಕುಟುಂಬಕ್ಕೆ 13 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.

ಮೂರು ವರ್ಷ ಕಳೆದರು ಸಹ ಪರಿಹಾರವನ್ನು ನೀಡಿರಲಿಲ್ಲ. ಕೊನೆಗೆ ನ್ಯಾಯಾಲಯದ ಮೂಲಕ ಬಸ್ ಜಪ್ತಿಗೆ ಆದೇಶ ಪಡೆದುಕೊಂಡೆವು. ಅದರಂತೆ ಬಸ್ ಜಪ್ತಿ ಮಾಡಿದಾಗ ಪರಿಹಾರ ಧನವನ್ನು ಪಾವತಿಸಲು ಸಾರಿಗೆ ಇಲಾಖೆಯ ಕಾನೂನು ಸಲಹೆಗಾರರು ಮುಚ್ಚಳಿಗೆ ನೀಡಿದ್ದರಿಂದ ನ್ಯಾಯಾಲಯವು ಬಸ್ ಬಿಡುಗಡೆ ಮಾಡಿತು ಎಂದು ಅರ್ಜಿದಾರ ಪರ ವಕೀಲ ಸಯ್ಯದ ಇಬ್ರಾಹಿಂಸಾಬ್ ಜಮದಾರ ತಿಳಿಸಿದ್ದಾರೆ.