ಬೆಂಗಳೂರು: ಕನ್ನಡ ಪತ್ರಿಕಾ ಲೋಕದ ಹಿರಿಯ ದೈನಿಕಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕ ಇಂದು 94ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕೆಯ ಸೇವೆಯನ್ನು ಶ್ಲಾಘಿಸಿ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, “ಸಂಯುಕ್ತ ಕರ್ನಾಟಕ ಹಲವು ದಶಕಗಳಿಂದ ಕನ್ನಡ ನಾಡಿನ ಚಿಂತನೆ, ಸಂಸ್ಕೃತಿ ಮತ್ತು ಸಮಾಜದ ಪ್ರತಿಬಿಂಬವಾಗಿ ಬೆಳಗುತ್ತಿದೆ. ಸತ್ಯವನ್ನು ಜನತೆಗೆ ತಲುಪಿಸುವಲ್ಲಿ ಪತ್ರಿಕೆಯ ಪಾತ್ರ ಅಪಾರ ಮತ್ತು ಅನನ್ಯ” ಎಂದು ಹೇಳಿದ್ದಾರೆ.
ಪತ್ರಿಕಾಧರ್ಮಕ್ಕೆ ನಿಷ್ಠೆಯೇ ಯಶಸ್ಸಿನ ರಹಸ್ಯ : ಪತ್ರಿಕೆಯ ದೀರ್ಘ ಪಯಣದ ಬಗ್ಗೆ ಮಾತನಾಡಿದ ಅವರು, “ಈ ಸುದೀರ್ಘ ಪ್ರಯಾಣದಲ್ಲಿ ಸಾಧಿಸಿರುವ ಯಶಸ್ಸು ಪತ್ರಿಕಾಧರ್ಮದ ಮೇಲಿನ ನಿಮ್ಮ ನಿಷ್ಠೆಯ ಫಲವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿಯೂ ಇದೇ ಧ್ಯೇಯ, ದೃಢತೆ ಮತ್ತು ನಂಬಿಕೆಯೊಂದಿಗೆ ಪತ್ರಿಕೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಆಶಿಸಿದ್ದಾರೆ.
ಕನ್ನಡ ಸಮಾಜಕ್ಕೆ ಪ್ರೇರಣೆ : ಸಂಯುಕ್ತ ಕರ್ನಾಟಕ ಇನ್ನೂ ಹಲವು ವರ್ಷಗಳ ಕಾಲ ಕನ್ನಡಿಗರಿಗೆ ಪ್ರೇರಣೆಯಾಗಲಿ, ಜನಜಾಗೃತಿ ಮೂಡಿಸುವ ತನ್ನ ಧ್ಯೇಯವನ್ನು ಮುಂದುವರಿಸಲಿ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವದ ಪಾತ್ರವಹಿಸಿರುವ ಈ ದೈನಿಕ, ಹಲವು ಪೀಳಿಗೆಗಳ ಓದುಗರ ವಿಶ್ವಾಸವನ್ನು ಗಳಿಸಿಕೊಂಡಿದ್ದು, ಇಂದಿಗೂ ಪ್ರಾಮಾಣಿಕ ವರದಿಗಳ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.






















