Home Advertisement
Home ಕೃಷಿ/ವಾಣಿಜ್ಯ ಮಾರುಕಟ್ಟೆಯಲ್ಲಿ ಹರಿಯಾಣ ರೈತನ ಕಲ್ಲಂಗಡಿಗೆ ಭಾರೀ ಬೇಡಿಕೆ: ಎಕರೆಗೆ 6.5 ಲಕ್ಷ ರೂ. ಆದಾಯದ ಗುಟ್ಟು...

ಮಾರುಕಟ್ಟೆಯಲ್ಲಿ ಹರಿಯಾಣ ರೈತನ ಕಲ್ಲಂಗಡಿಗೆ ಭಾರೀ ಬೇಡಿಕೆ: ಎಕರೆಗೆ 6.5 ಲಕ್ಷ ರೂ. ಆದಾಯದ ಗುಟ್ಟು ಇಲ್ಲಿದೆ!

0
107

ಕೃಷಿ ಎಂದರೆ ಕೇವಲ ಕಷ್ಟ ಮಾತ್ರ ಅಲ್ಲ, ಸರಿಯಾದ ತಂತ್ರಜ್ಞಾನ ಮತ್ತು ಮಾರುಕಟ್ಟೆ ಜ್ಞಾನವಿದ್ದರೆ ಅದು ಲಕ್ಷಾಂತರ ರೂಪಾಯಿ ಲಾಭ ತರುವ ಉದ್ಯಮ ಎಂಬುದನ್ನು ಹರಿಯಾಣದ ಪಾಣಿಪತ್ ಜಿಲ್ಲೆಯ ಸಿವಾ ಗ್ರಾಮದ ರೈತ ರಾಮ್ ಪ್ರತಾಪ್ ಶರ್ಮಾ ಸಾಬೀತುಪಡಿಸಿದ್ದಾರೆ. 63 ವರ್ಷದ ಈ ಪ್ರಗತಿಪರ ರೈತ, ಐದು ವಿಭಿನ್ನ ಬಣ್ಣಗಳ ಕಲ್ಲಂಗಡಿಗಳನ್ನು ಬೆಳೆಯುವ ಮೂಲಕ ಇಂದು ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಸಾಮಾನ್ಯವಾಗಿ ನಾವು ಕೆಂಪು ಕಲ್ಲಂಗಡಿಗಳನ್ನು ಮಾತ್ರ ನೋಡುತ್ತೇವೆ. ಆದ್ರೆ ಶರ್ಮಾ ಕೆಂಪು, ಕಿತ್ತಳೆ, ಕಡು ಹಳದಿ, ತಿಳಿ ಹಳದಿ ಮತ್ತು ನೀಲಿ ಬಣ್ಣದ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇವುಗಳ ಗುಣಮಟ್ಟಕ್ಕಾಗಿ ಥೈಲ್ಯಾಂಡ್ ಮತ್ತು ತೈವಾನ್‌ನಿಂದ ಕೆಜಿಗೆ 1 ಲಕ್ಷ ರೂಪಾಯಿ ಬೆಲೆಯ ಹೈಬ್ರಿಡ್ ಬೀಜಗಳನ್ನು ತರಿಸಿಕೊಳ್ಳುತ್ತಾರೆ. ಕೇವಲ 300 ಗ್ರಾಂ ಬೀಜದಿಂದ ಒಂದು ಎಕರೆಯಲ್ಲಿ ಸುಮಾರು 6,000 ಸಸ್ಯಗಳನ್ನು ಬೆಳೆಸುತ್ತಿದ್ದು, ಹನಿ ನೀರಾವರಿ ಮತ್ತು ಪಾಲಿಹೌಸ್‌ನಂತಹ ಸುಧಾರಿತ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ.

ಒಂದು ಎಕರೆಯಲ್ಲಿ ಸುಮಾರು 100 ಕ್ವಿಂಟಾಲ್ ಕಲ್ಲಂಗಡಿ ಬೆಳೆಯುವ, ಕೆಜಿಗೆ 50 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ವೆಚ್ಚವನ್ನು ಕಳೆದು ಕಲ್ಲಂಗಡಿಯಿಂದಲೇ ಎಕರೆಗೆ 4 ಲಕ್ಷ ರೂಪಾಯಿ ನಿವ್ವಳ ಲಾಭ ಪಡೆಯುತ್ತಾರೆ. ಹಾಗೇ ಅದೇ ಹೊಲದಲ್ಲಿ ಮಿಶ್ರ ಬೆಳೆಯಾಗಿ ಹಾಗಲಕಾಯಿ, ಪಾಲಕ್, ಕ್ಯಾರೆಟ್ ಸೇರಿದಂತೆ 20ಕ್ಕೂ ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ. ಇದರಿಂದ ಹೆಚ್ಚುವರಿಯಾಗಿ 1.5 ಲಕ್ಷ ರೂಪಾಯಿ ಲಭಿಸುತ್ತದೆ. ಒಟ್ಟಾರೆಯಾಗಿ ವಾರ್ಷಿಕವಾಗಿ ಪ್ರತಿ ಎಕರೆಗೆ 6.5 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

ದೆಹಲಿ, ಚಂಡೀಗಢ ಮತ್ತು ಗುರಗಾಂವ್‌ನಂತಹ ನಗರಗಳ ದೊಡ್ಡ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳು ಖಾಯಂ ಗ್ರಾಹಕರು. ಫೋನ್ ಕರೆಯ ಮೂಲಕವೇ ಮನೆ ಮನೆಗೆ ತಾಜಾ ಹಣ್ಣುಗಳನ್ನು ತಲುಪಿಸುವ ಆನ್‌ಲೈನ್ ಜಾಲವನ್ನು ಹೊಂದಿದ್ದಾರೆ. ಈ ಕೃಷಿ ಚಟುವಟಿಕೆಯಿಂದ ಏಳು ಜನ ಕಾರ್ಮಿಕರಿಗೆ ಉದ್ಯೋಗವೂ ಸಿಕ್ಕಿದೆ.

ರಾಮ್ ಪ್ರತಾಪ್ ಶರ್ಮಾ ತಮ್ಮ ನವೀನ ಕೃಷಿ ಪದ್ಧತಿಯನ್ನು ಗುರುತಿಸಿದ ಹರಿಯಾಣ ಸರ್ಕಾರ 2019 ರಲ್ಲಿ ‘ಹರಿಯಾಣ ಕೃಷಿ ರತ್ತನ್’ ಪ್ರಶಸ್ತಿ ನೀಡಿ ಗೌರವಿಸಿದೆ. “ರೈತರು ಪ್ರಾಮಾಣಿಕವಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಬಹುದು” ಎಂಬುದು ಶರ್ಮಾ ಕಿವಿಮಾತು. ಹವಾಮಾನಕ್ಕೆ ತಕ್ಕಂತೆ ಬೆಳೆ ಬದಲಾವಣೆ ಮತ್ತು ಸರ್ಕಾರದ ಸಬ್ಸಿಡಿಗಳ ಸದುಪಯೋಗ ರೈತನ ಜೀವನದ ಯಶಸ್ಸಿನ ಮೂಲ ದಾರಿ ಮತ್ತು ಮಂತ್ರವಾಗಿದೆ.