Home Advertisement
Home ಸುದ್ದಿ ವಿದೇಶ 13 ಲಕ್ಷದ ನಂಬರ್ ಪ್ಲೇಟ್.. ಕೋಟಿ ಬೆಲೆಯ ಕಾರು.. ಚೀನಾದಲ್ಲಿ ನಡೆದ ಈ ಅಂತ್ಯಸಂಸ್ಕಾರ ಸಖತ್...

13 ಲಕ್ಷದ ನಂಬರ್ ಪ್ಲೇಟ್.. ಕೋಟಿ ಬೆಲೆಯ ಕಾರು.. ಚೀನಾದಲ್ಲಿ ನಡೆದ ಈ ಅಂತ್ಯಸಂಸ್ಕಾರ ಸಖತ್ ವೈರಲ್!

0
55

ಚೀನಾದ ಲಿಯಾನಿಂಗ್ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಅಂತ್ಯಸಂಸ್ಕಾರವೊಂದು ಇಡೀ ವಿಶ್ವದ ಗಮನ ಸೆಳೆದಿದೆ. ತಂದೆಯ ಮೇಲಿನ ಅತಿಯಾದ ಪ್ರೀತಿಯಿಂದ ಅವರ ಮಕ್ಕಳು ಮಾಡಿದ ಒಂದು ಕಾರ್ಯ ಈಗ ಆ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಮೃತಪಟ್ಟ ವೃದ್ಧ ವ್ಯಕ್ತಿ ಜೀವಂತವಾಗಿದ್ದಾಗ ಅವರಿಗೆ ಐಷಾರಾಮಿ ಕಾರುಗಳೆಂದರೆ ಬಹಳ ಇಷ್ಟವಾಗಿತ್ತು. ಈ ಕಾರಣಕ್ಕಾಗಿ ಅವರ ಮಕ್ಕಳು ಬರೋಬ್ಬರಿ 1.49 ಕೋಟಿ ರೂಪಾಯಿ ಮೌಲ್ಯದ ಮೆರ್ಸಿಡಿಸ್ ಬೆಂಜ್ (Mercedes-Benz S450L) ಕಾರನ್ನೇ ಶವಪೆಟ್ಟಿಗೆಯಂತೆ ಬಳಸಿ, ತಂದೆಯ ಪಾರ್ಥಿವ ಶರೀರವನ್ನು ಅದರೊಳಗೆ ಇರಿಸಿ ಹೂತುಹಾಕಿದ್ದಾರೆ. ಈ ಕಾರಿಗೆ ಅಳವಡಿಸಲಾಗಿದ್ದ ‘8888’ ಸಂಖ್ಯೆಯ ವಿಐಪಿ ನಂಬರ್ ಪ್ಲೇಟ್ ಬೆಲೆಯೇ ಬರೋಬ್ಬರಿ 13 ಲಕ್ಷ ರೂಪಾಯಿಗೂ ಅಧಿಕವಾಗಿತ್ತು ಎಂಬುದು ಅಚ್ಚರಿಯ ಸಂಗತಿ.

ಈ ಅಂತ್ಯಸಂಸ್ಕಾರದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕಾರಿಗೆ ಕೆಂಪು ಬಟ್ಟೆ ಹೊದಿಸಿ, ಸೈಡ್ ಮಿರರ್‌ಗಳಿಗೆ ಕೆಂಪು ರಿಬ್ಬನ್ ಕಟ್ಟಿ ಸಿಂಗರಿಸಿರುವುದನ್ನು ಕಾಣಬಹುದು. ಈ ಬೃಹತ್ ಕಾರನ್ನು ಗುಂಡಿಗೆ ಇಳಿಸಲು ಸಹಾಯ ಮಾಡಿದ ಪ್ರತಿಯೊಬ್ಬ ಗ್ರಾಮಸ್ಥನಿಗೂ ಕುಟುಂಬದ ಸದಸ್ಯರು ತಲಾ 6,800 ರೂಪಾಯಿಗಳ ಹಣವನ್ನು ನೀಡಿದ್ದರು. ಚೀನಾದಲ್ಲಿ ಸತ್ತವರಿಗೆ ಮರುಜನ್ಮದಲ್ಲಿ ಅನುಕೂಲವಾಗಲಿ ಎಂಬ ನಂಬಿಕೆಯಿಂದ ಕಾಗದದ ಮನೆ ಅಥವಾ ಕಾರುಗಳನ್ನು ಸುಡುವುದು ಒಂದು ಸಂಪ್ರದಾಯ. ಆದರೆ, ಈ ಕುಟುಂಬವು ನೈಜ ಐಷಾರಾಮಿ ಕಾರನ್ನೇ ಮಣ್ಣು ಮಾಡುವ ಮೂಲಕ ಎಲ್ಲರನ್ನೂ ದಂಗಾಗಿಸಿತ್ತು.

ಆದರೆ, ಈ ಘಟನೆ ನಡೆದ ಮರುದಿನವೇ ಚೀನಾ ಸರ್ಕಾರ ಹಸ್ತಕ್ಷೇಪ ಮಾಡಿದೆ. ಸ್ಥಳೀಯ ನಾಗರಿಕ ವ್ಯವಹಾರಗಳ ಬ್ಯೂರೋ ಈ ಕುಟುಂಬವನ್ನು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿದ್ದು, ಇದನ್ನು “ಊಳಿಗಮಾನ್ಯ ಕಾಲದ ಮೂಢನಂಬಿಕೆ” ಎಂದು ಕರೆದಿದೆ. ಅಷ್ಟೇ ಅಲ್ಲದೆ, ಭೂಮಿಯಲ್ಲಿ ಕಾರನ್ನು ಹೂತುಹಾಕುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವುದಕ್ಕೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೂತಿದ್ದ ಕಾರನ್ನು ಮರಳಿ ಹೊರತೆಗೆಯುವ ವೆಚ್ಚ, ಆ ಜಾಗವನ್ನು ಮೊದಲಿನಂತೆ ಸರಿಪಡಿಸುವ ಕೆಲಸ ಮತ್ತು ಪರಿಸರ ಪುನಃಸ್ಥಾಪನೆಯ ಸಂಪೂರ್ಣ ವೆಚ್ಚವನ್ನು ಕುಟುಂಬವೇ ಭರಿಸಬೇಕೆಂದು ಸರ್ಕಾರ ಆದೇಶಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. “ಶ್ರೀಮಂತಿಕೆಯ ಅಹಂಕಾರದಿಂದ ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ” ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ಇದನ್ನು ಮೃತರ ಮೇಲಿನ ಮಕ್ಕಳ ಪ್ರೀತಿ ಎಂದು ಸಮರ್ಥಿಸಿಕೊಂಡಿದ್ದಾರೆ. ಏನೇ ಇರಲಿ, ಪ್ರೀತಿಯ ಹೆಸರಿನಲ್ಲಿ ಮಾಡಿದ ಈ ವಿಚಿತ್ರ ಸಾಹಸವು ಕೊನೆಗೆ ಕುಟುಂಬದವರು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡಿದೆ ಮತ್ತು ಸರ್ಕಾರದಿಂದ ಭಾರಿ ದಂಡವನ್ನೂ ಎದುರಿಸುವಂತೆ ಮಾಡಿದೆ.