ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ನ್ಯಾಯಾಲಯವು ಕೊಲೆ (IPC 302) ಮತ್ತು ಅಪರಾಧ ಪಿತೂರಿ (IPC 120B) ಸೇರಿದಂತೆ ಗಂಭೀರ ಆರೋಪಗಳಲ್ಲಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ, ಪ್ರತಿಯೊಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ ₹30,000 ದಂಡ ಪಾವತಿಸಲು ಆದೇಶಿಸಿದೆ.
ಈ ಪ್ರಕರಣವು 2016ರ ಜೂನ್ 15ರಂದು ಧಾರವಾಡದಲ್ಲಿ ನಡೆದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದೆ. ಭೂ ವಿವಾದ ಮತ್ತು ರಾಜಕೀಯ ವೈಮನಸ್ಸು ಈ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ನಡೆಸಿ, ಹಲವಾರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಪಟ್ಟಿ ಸಲ್ಲಿಸಿತ್ತು.
ತೀರ್ಪಿನ ನಂತರ ವಿನಯ್ ಕುಲಕರ್ಣಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಪಿನ ಹಿನ್ನೆಲೆಯಲ್ಲಿ ಧಾರವಾಡ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)



















