ಬೆಂಗಳೂರು: ದಸರಾ ರಜೆ ಆರಂಭವಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಾದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಅ. 15ರಿಂದಲೇ ಈ ಎರಡೂ ಜಿಲ್ಲೆಗಳ ಹೋಂಸ್ಟೇ ಮತ್ತು ಹೋಟೆಲ್ಗಳ ಸುಮಾರು ಶೇ. 50ರಷ್ಟು ಕೊಠಡಿಗಳು ಮುಂಗಡವಾಗಿ ಬುಕ್ ಆಗಿವೆ ಎಂದು ಹೋಂಸ್ಟೇ ಮಾಲೀಕರ ಸಂಘಟನೆಗಳು, ಹೋಟೆಲ್ ಮಾಲೀಕರು ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರು ಹೋಂಸ್ಟೇ ಮಾಲೀಕರ ಸಂಘದ ಸದಸ್ಯ ಹಾಗೂ ಸಾರಂಗ ಹೋಂಸ್ಟೇ ಮಾಲೀಕ ಎಚ್.ಎಲ್. ಗಿರೀಶ್ ಮಾತನಾಡಿ, ಅಕ್ಟೋಬರ್ 15ರಿಂದ ಪ್ರವಾಸಿಗರ ಆಗಮನ ಹೆಚ್ಚಾಗಿದೆ.
ಸುಮಾರು ಶೇ. 50ರಷ್ಟು ಕೊಠಡಿಗಳನ್ನು ಮಾಲೀಕರಿಗೆ ನೇರವಾಗಿ ದೂರವಾಣಿ ಕರೆ ಮಾಡುವ ಮೂಲಕ ಬುಕ್ ಮಾಡಲಾಗಿದೆ. ಶೇ. 30ರಷ್ಟು ಪ್ರವಾಸಿಗರು ಆನ್ಲೈನ್ ಬುಕ್ಕಿಂಗ್ ವೇದಿಕೆಗಳ ಮೂಲಕ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ ಉಳಿದ ಶೇ. 20ರಷ್ಟು ಪ್ರವಾಸಿಗರು ಯಾವುದೇ ಮುಂಗಡ ಬುಕ್ಕಿಂಗ್ ಇಲ್ಲದೆ ಆಗಮಿಸಿ ಕೊಠಡಿ ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರವಾಸಿಗರ ಬೇಡಿಕೆ ಹೆಚ್ಚಿದ್ದರೂ ಸದ್ಯಕ್ಕೆ ದರ ಹೆಚ್ಚಿಸುವುದಿಲ್ಲ. ಹಾಸಿಗೆಯ ವ್ಯವಸ್ಥೆ ಹಾಗೂ ಕೊಠಡಿಯ ಸೌಲಭ್ಯಗಳಿಗೆ ಅನುಗುಣವಾಗಿ ದಿನಕ್ಕೆ 1,500ರಿಂದ 2,500ರವರೆಗೆ ಬಾಡಿಗೆ ಇರಲಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತ್ರ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಕಳಸದಲ್ಲಿರುವ ನಮ್ಮನೆ ಹೋಂಸ್ಟೇ ಮಾಲೀಕರು ಮಾತನಾಡಿ, ಪ್ರವಾಸಿಗರು ಕೊನೆಯ ಕ್ಷಣದಲ್ಲಿ ಬುಕ್ಕಿಂಗ್ ಮಾಡಲು ಮುಂದಾಗುತ್ತಾರೆ. ಇದರಿಂದ ಹೋಂಸ್ಟೇ ಮಾಲೀಕರು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೊಡಗಿನಲ್ಲಿ 24ರವರೆಗೆ ಖಾಲಿ ಇಲ್ಲ: ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ 17ರಿಂದ ಪ್ರವಾಸಿಗರ ಸಂಖ್ಯೆ ಗರಿಷ್ಠ ಮಟ್ಟ ತಲುಪಿದೆ. ಈ ಅವಧಿಯಲ್ಲಿ ಬಹುತೇಕ ಹೋಂಸ್ಟೇಗಳು ಮತ್ತು ಮಧ್ಯಮ ದರ್ಜೆಯ ಹೋಟೆಲ್ಗಳು ಭರ್ತಿಯಾಗಿವೆ. ಈ ಕುರಿತು ಕೊಡಗು ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಮಂತಿ ಗಣೇಶ್ ಮಾತನಾಡಿ, ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆ ಮತ್ತು ದಸರಾ ಆಚರಣೆಗಳು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಆದರೆ ಕೊಡಗಿನಲ್ಲಿ ರಾತ್ರಿ ವೇಳೆಯೂ ಸಂಭ್ರಮ ಮುಂದುವರಿಯುತ್ತದೆ. ಬಹುತೇಕ ಮಂದಿ ಅ. 24ರವರೆಗೆ ಇಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಯೂರ ಭರ್ತಿ: ಕೆಎಸ್ಟಿಡಿಸಿಯ ಮಯೂರ ಹೋಟೆಲ್ಗಳ ಹಿರಿಯ ವ್ಯವಸ್ಥಾಪಕ ದೇವರಾಜ್ ಎಚ್.ಎಸ್. ಮಾತನಾಡಿ, ರಾಜ್ಯದ 25 ಮಯೂರ ಹೋಟೆಲ್ಗಳಲ್ಲಿ ಮಧ್ಯಮ ದರ್ಜೆಯ ಕೊಠಡಿಗಳ ದರ ದಿನಕ್ಕೆ 2,500 ಆಗಿದೆ. 20 ಹೋಟೆಲ್ಗಳ ಕೊಠಡಿಗಳು ಮುಂಚಿತವಾಗಿಯೇ ಬುಕ್ ಆಗಿದ್ದವು. ಉಳಿದವು ಕೂಡಾ ಕಳೆದ ಶನಿವಾರ ಬುಕ್ ಆಗಿವೆ ಎಂದು ವಿವರಿಸಿದ್ದಾರೆ.
ಸರ್ವಿಸ್ ಅಪಾರ್ಟ್ಮೆಂಟ್ಗೆ ಬೇಡಿಕೆ: ದಸರಾ ಸಂದರ್ಭದಲ್ಲಿ ಮೈಸೂರು ಭಾಗದಲ್ಲಿ ಹೋಟೆಲ್ಗಳು ಬುಕ್ ಆಗಿದ್ದರಿಂದ ಸರ್ವಿಸ್ ಅಪಾರ್ಟ್ಮೆಂಟ್ಗಳಿಗೆ ಬೇಡಿಕೆ ಬಂದಿದ್ದು, ಈ ಭಾಗದಲ್ಲಿ 100ಕ್ಕೂ ಹೆಚ್ಚು ಸರ್ವಿಸ್ ಅಪಾರ್ಟ್ಮೆಂಟ್ಗಳಲ್ಲಿ ಪ್ರವಾಸಿಗರು ಉಳಿದುಕೊಂಡಿದ್ದಾರೆ.





















