Home Advertisement
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿಯಲ್ಲಿ ಕಲಾ ಸಂಭ್ರಮ: ಭರತನಾಟ್ಯ-ಯಕ್ಷಗಾನ ಮೆರಗು

ಹುಬ್ಬಳ್ಳಿಯಲ್ಲಿ ಕಲಾ ಸಂಭ್ರಮ: ಭರತನಾಟ್ಯ-ಯಕ್ಷಗಾನ ಮೆರಗು

0
87

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಾಂಸ್ಕೃತಿಕ ಲೋಕವನ್ನು ಅರಳಿಸಲು ಸಜ್ಜಾಗಿರುವ ‘ವಸಂತ ಋತುಗಾನ–ಕಲಾಯಾನ’ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಿಂದಿನಿಂದ 17ರಿಂದ ಸಿದ್ಧಾರೂಢ ಮಠದಲ್ಲಿ ಆರಂಭವಾಗಿರುವ ಈ ಭವ್ಯ ಕಲೋತ್ಸವವು ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ದೇಶದ ಮಟ್ಟದಲ್ಲಿ ಮೆರೆದಿಡುವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

‘ಸಂಯುಕ್ತ ಕರ್ನಾಟಕ’ ವತಿಯಿಂದ ಆಯೋಜಿಸಲ್ಪಟ್ಟಿರುವ ಈ ಮಹೋತ್ಸವಕ್ಕೆ ಸಿದ್ಧಾರೂಢ ಮಠ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗ ನೀಡಿದ್ದು, ಜಾನಪದದಿಂದ ಶಾಸ್ತ್ರೀಯದವರೆಗೆ ಹಲವು ಕಲಾ ಪ್ರಕಾರಗಳ ಸಮ್ಮಿಳನವು ಕಲಾರಸಿಕರಿಗೆ ಅಪೂರ್ವ ಅನುಭವ ನೀಡಲಿದೆ.

ತುಳಸಿ ಹೆಗಡೆ ಅವರ ‘ವಿಶ್ವಾಭಿಗಮನಂ’ ಏಕವ್ಯಕ್ತಿ ಯಕ್ಷಗಾನ ರೂಪಕ: ಮಧ್ಯಾಹ್ನ 3:30ರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಖ್ಯಾತ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಅವರ ‘ವಿಶ್ವಾಭಿಗಮನಂ’ ಏಕವ್ಯಕ್ತಿ ಯಕ್ಷಗಾನ ರೂಪಕ ನಡೆಯಲಿದೆ. ಕಿರಿಯ ವಯಸ್ಸಿನಲ್ಲೇ ವಿಶ್ವದಾಖಲೆ ನಿರ್ಮಿಸಿರುವ ತುಳಸಿ, ಈಗಾಗಲೇ 800ಕ್ಕೂ ಹೆಚ್ಚು ಪ್ರದರ್ಶನಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

‘ವಿಶ್ವಾಭಿಗಮನಂ’ ಪ್ರದರ್ಶನವು ಮಾನವನ ಒಳಗಿನ ವಿಶ್ವ ಮತ್ತು ಹೊರಗಿನ ವಿಶ್ವದ ತತ್ವವನ್ನು ಸಾರುತ್ತ, ವೈಯಕ್ತಿಕ ಶಾಂತಿ ಮೂಲಕ ಸಾಮಾಜಿಕ ಶಾಂತಿಯ ಅಗತ್ಯವನ್ನು ಒತ್ತಿಹೇಳುತ್ತದೆ. ತುಳಸಿ ಹೆಗಡೆ ಅವರ ಭಾವಪೂರ್ಣ ಅಭಿನಯ ಮತ್ತು ನೃತ್ಯ ಈ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಈ ಪ್ರದರ್ಶನಕ್ಕೆ ಭಾಗವತಿಕೆ-ಗಾಯನದಲ್ಲಿ ಕೊಳಗಿ ಕೇಶವ ಹೆಗಡೆ, ಮದ್ದಳೆಯಲ್ಲಿ ಶಂಕರ್ ಭಾಗ್ವತ್ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಗೌಡ ಸಹಕರಿಸಲಿದ್ದಾರೆ. ಕಾವ್ಯ ರಚನೆಯನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾಡಿದ್ದು, ನಿರ್ದೇಶನವನ್ನು ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ನಿರ್ವಹಿಸಿದ್ದಾರೆ.

‘ಸನಾತನಿ’ ನೃತ್ಯ ರೂಪಕ ಪ್ರಮುಖ ಆಕರ್ಷಣೆ : ಕಲೋತ್ಸವದ ಮೊದಲ ದಿನವೇ ಸಂಜೆ 4:45ಕ್ಕೆ ಭರತನಾಟ್ಯ ನೃತ್ಯಗಾರ ಹಾಗೂ ‘ಕಲಾ ಸುಜಯ’ ಸಂಸ್ಥೆಯ ಸ್ಥಾಪಕರಾದ ವಿದ್ವಾನ್ ಸುಜಯ ಶಾನಭಾಗ್ ಮತ್ತು ಅವರ ‘ಸನಾತನಿ’ ತಂಡ ವಿಶೇಷ ನೃತ್ಯ ರೂಪಕ ಪ್ರದರ್ಶಿಸಲಿದೆ. ‘ಸನಾತನಿ’ ಎಂಬ ಈ ನೃತ್ಯ ರೂಪಕವು ಸನಾತನ ಧರ್ಮದ ಮೂಲ ತತ್ವಗಳನ್ನು ಆಧರಿಸಿದ್ದು, ವೇದ ಸಂಸ್ಕೃತಿ, ಸಿಂಧೂ-ಸರಸ್ವತಿ ನಾಗರಿಕತೆ ಹಾಗೂ ಶಾರದಾ ಪೀಠದ ವೈಭವವನ್ನು ಕಲಾತ್ಮಕವಾಗಿ ಚಿತ್ರಿಸುತ್ತದೆ.

ದುರ್ಗಾ ಸಪ್ತಶತಿಯ ಶ್ಲೋಕಗಳ ಹಿನ್ನಲೆಯಲ್ಲಿ ಜಗದ್ಗುರು ಆದಿಶಂಕರಾಚಾರ್ಯರ ದಿಗ್ವಿಜಯ ಯಾತ್ರೆಯ ಕಥಾನಕವನ್ನು ಒಳಗೊಂಡಿರುವ ಈ ರೂಪಕವು ದಕ್ಷಿಣದಿಂದ ಉತ್ತರದವರೆಗೆ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಮನೋಜ್ಞವಾಗಿ ಮೂಡಿಸುವ ನಿರೀಕ್ಷೆಯಿದೆ.

ಕಲಾ ವೈಭವದ ಸಂಭ್ರಮ: ಈ ಮಹೋತ್ಸವದಲ್ಲಿ ಜಾನಪದ ಗಾಯನ, ಯಕ್ಷಗಾನ, ನೃತ್ಯ ರೂಪಕಗಳು, ನಾಟಕಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹುಬ್ಬಳ್ಳಿ-ಧಾರವಾಡ ಭಾಗವನ್ನು ಕಲಾ ಸಂಭ್ರಮದಲ್ಲಿ ತೇಲಿಸಲಿವೆ. ಒಟ್ಟಿನಲ್ಲಿ ‘ವಸಂತ ಋತುಗಾನ–ಕಲಾಯಾನ’ವು ಕೇವಲ ಉತ್ಸವವಲ್ಲ, ಕರ್ನಾಟಕದ ಸಾಂಸ್ಕೃತಿಕ ಆತ್ಮವನ್ನು ಒಗ್ಗೂಡಿಸುವ ಕಲಾ ಯಾನವಾಗಿದ್ದು, ಪ್ರೇಕ್ಷಕರಿಗೆ ಮನಮಿಡಿಯುವ ಅನುಭವ ನೀಡಲು ಸಜ್ಜಾಗಿದೆ.