Home Advertisement
Home ಸುದ್ದಿ ರಾಜ್ಯ ಕರ್ನಾಟಕದಲ್ಲಿ ಟ್ರೆಕ್ಕಿಂಗ್: ಸುರಕ್ಷಿತ ಚಾರಣಕ್ಕೆ SOP ಜಾರಿ

ಕರ್ನಾಟಕದಲ್ಲಿ ಟ್ರೆಕ್ಕಿಂಗ್: ಸುರಕ್ಷಿತ ಚಾರಣಕ್ಕೆ SOP ಜಾರಿ

0
81

ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಪ್ರಕಟಿಸಿದ್ದಾರೆ. ಇತ್ತೀಚೆಗೆ ರಾಜ್ಯದ ವಿವಿಧ ಚಾರಣ ಪಥಗಳಲ್ಲಿ ಸಂಭವಿಸಿದ ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಯಾವುದೇ ಚಾರಣಿಗರು ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಕ ಕಡ್ಡಾಯವಾಗಿದ್ದು, ಒಂದು ಬ್ಯಾಚ್‌ನಲ್ಲಿ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕ್ರಮವು ಚಾರಣದ ವೇಳೆ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ನಿಯಂತ್ರಿತ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

ಚಾರಣಿಗರಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬರ ಮೊಬೈಲ್‌ಗೆ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುತ್ತದೆ. ಮಾರ್ಗದರ್ಶಕರಿಗೆ GPS ಹೊಂದಿದ ವಾಕಿ-ಟಾಕಿ ಒದಗಿಸಲಾಗುವುದು. ಇದರಿಂದ ದಾರಿ ತಪ್ಪುವಂತಹ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಜೊತೆಗೆ, ಬೇಸ್ ಕ್ಯಾಂಪ್‌ನಲ್ಲಿ ಚಾರಣದ ಪೂರ್ವಭಾವಿ ಮಾಹಿತಿ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ನೀಡಲಾಗುತ್ತದೆ.

ಇನ್ನು, ಶಬ್ದಕಾರಿ ಸಾಧನಗಳು, ಆಯುಧಗಳು, ಕ್ಯಾಂಪ್ ಫೈರ್ ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಚಾರಣದ ಅವಧಿಯಲ್ಲಿ ಮಾರ್ಗದರ್ಶಕರು ಚಾರಣಿಗರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದ್ದು, ಪ್ರತಿ ಅರ್ಧಗಂಟೆಗೆ ಬೇಸ್ ಕ್ಯಾಂಪ್‌ನೊಂದಿಗೆ ಸಂಪರ್ಕದಲ್ಲಿರಬೇಕು. ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಹಾಗೂ ಹಿರಿಯ ನಾಗರಿಕರಿಗೆ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ಕಡ್ಡಾಯವಾಗಿದೆ.

ಅರಣ್ಯ ಇಲಾಖೆ ಶೀಘ್ರದಲ್ಲೇ ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಅರಣ್ಯ ವಿಹಾರ ಪೋರ್ಟಲ್ aranyavihaara.karnataka.gov.in ನಲ್ಲಿ ಸೇರಿಸಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲು ಯೋಜಿಸಿದೆ ಎಂದು ತಿಳಿಸಿದ್ದಾರೆ