ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಮುಗಿಲು ಮುಟ್ಟಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುವ ದಂಧೆಗೆ ಇಳಿದಿದ್ದಾರೆ. ಆದರೆ ಈ ಬಾರಿ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಸ್ಟಿಂಗ್ ಆಪರೇಷನ್‌ನಲ್ಲಿ ದೊಡ್ಡ ಜಾಲವೊಂದು ಬಯಲಾಗಿದೆ. ಕ್ರೀಡಾಂಗಣದ ಒಳಗೆ ನಡೆಯುತ್ತಿದ್ದ ಈ ಅಕ್ರಮ ವ್ಯವಹಾರದಲ್ಲಿ ಸ್ವತಃ ಕೆಎಸ್‌ಸಿಎ ಸದಸ್ಯನೇ ಭಾಗಿಯಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಲಕ್ಷ್ಮಿ ಕ್ಯಾಟರ್ಸ್ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಪ್ರಮುಖ ಆರೋಪಿ. ಈತ ಅಭಿಮಾನಿಗಳಿಗೆ ದುಪ್ಪಟ್ಟು ಹಣಕ್ಕೆ ಟಿಕೆಟ್ ಮಾರುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಚಂದ್ರಶೇಖರ್ ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದು, ಈ ಇಡೀ ದಂಧೆಯ ಹಿಂದೆ ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಎರಡು ಖಾಸಗಿ ಕಂಪನಿಗಳ ಮೂಲಕ ಆನ್‌ಲೈನ್‌ನಲ್ಲಿ ಮೊದಲೇ ಟಿಕೆಟ್ ಪಡೆದುಕೊಳ್ಳುತ್ತಿದ್ದ ಗಣೇಶ್ ಹರಿಕೇಶ್, ನಂತರ ಅವುಗಳನ್ನು ಚಂದ್ರಶೇಖರ್ ಮೂಲಕ ಹೆಚ್ಚಿನ ಬೆಲೆಗೆ ಮಾರುಕಟ್ಟೆಗೆ ಬಿಡುತ್ತಿದ್ದ ಎನ್ನಲಾಗಿದೆ.
ಈ ಗ್ಯಾಂಗ್ ಮೊದಲ ಪಂದ್ಯದಲ್ಲೇ ಬರೋಬ್ಬರಿ 81 ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಂಡಿತ್ತು. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯಕ್ಕೆ ಸುಮಾರು 100 ಟಿಕೆಟ್ ಮಾರಾಟ ಮಾಡಲು ಇವರು ಸಿದ್ಧತೆ ನಡೆಸಿದ್ದರು. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ, ಚಂದ್ರಶೇಖರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಚಂದ್ರಶೇಖರ್, ಗಣೇಶ್ ಹರಿಕೇಶ್ ಹಾಗೂ ಟಿಕೆಟ್ ನೀಡಿದ ಎರಡು ಖಾಸಗಿ ಕಂಪನಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಕೆಎಸ್‌ಸಿಎ ಸದಸ್ಯ ಗಣೇಶ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.























