Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ : ಮುಂದಿನ ಟಾರ್ಗೆಟ್ ಜಮೀರ್?

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ : ಮುಂದಿನ ಟಾರ್ಗೆಟ್ ಜಮೀರ್?

0
59

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವಂತಹ ಹೇಳಿಕೆ ನೀಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್ ಸರ್ಕಾರದಲ್ಲಿ “ರಾಜೀನಾಮೆ ಪರ್ವ” ಆರಂಭವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಕ್ರಮವಾಗಿ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ K. ಅಬ್ದುಲ್ ಜಬ್ಬಾರ್ ರಾಜೀನಾಮೆ ಹಾಗೂ ಸಿಎಂ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಘಟನೆಗಳು ಕಾಂಗ್ರೆಸ್ ಒಳಜಗಳದ ಪರಿಣಾಮವೆಂದು ಹೇಳಿದರು.

ಉಪಚುನಾವಣೆ ಪರಿಣಾಮವೇ? : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರ ಅಸಮಾಧಾನದಿಂದ ಕಾಂಗ್ರೆಸ್ ಅಭ್ಯರ್ಥಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂಬ ಗುಪ್ತಚರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದರು. ಇದೇ ಹಿನ್ನೆಲೆಯಲ್ಲಿ ಜಬ್ಬಾರ್ ರಾಜೀನಾಮೆ ನೀಡಿದ್ದು, ನಂತರ ಪಕ್ಷದ ಹಲವಾರು ಪದಾಧಿಕಾರಿಗಳು ಸಹ ರಾಜೀನಾಮೆ ನೀಡಿದ್ದಾರೆ ಎಂದರು.

“ಇನ್ನಷ್ಟು ಬದಲಾವಣೆ ಸಾಧ್ಯ” : ಈಗಾಗಲೇ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಿರುವ ಹಿನ್ನೆಲೆ, ಮುಂದಿನ ಗುರಿ ಜಮೀರ್ ಅಹಮದ್ ಆಗಬಹುದು ಎಂದು ಅವರು ಹೇಳಿಕೆ ನೀಡಿದರು. ಇದರಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅಸ್ಥಿರತೆ ಹೆಚ್ಚುತ್ತಿದೆ ಎಂದು ಟೀಕಿಸಿದರು.

ದೆಹಲಿ ರಾಜಕೀಯ ಚಟುವಟಿಕೆ : ಮೊದಲ ಹಂತದಲ್ಲಿ 38 ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಲಾಬಿ ನಡೆಸಿದ್ದಾರೆ. ಈಗ ಮತ್ತೊಂದು ತಂಡದ 23 ಹಿರಿಯ ಶಾಸಕರು ಸಹ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಈ ಬೆಳವಣಿಗೆಗಳ ನಡುವೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ದೆಹಲಿಗೆ ತೆರಳಿದ ಶಾಸಕರಿಗೆ ಎಚ್ಚರಿಕೆ ನೀಡಿರುವುದನ್ನೂ ಉಲ್ಲೇಖಿಸಿದರು.

ಸರ್ಕಾರದ ವಿರುದ್ಧ ಟೀಕೆ : ರಾಜ್ಯದಲ್ಲಿ ಭೀಕರ ಬಿಸಿಲಿನಿಂದ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದರೂ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೇಣುಕಾಚಾರ್ಯ ಆರೋಪಿಸಿದರು. ಅಂತರ್ಜಲ ಮಟ್ಟ ಕುಸಿದಿದ್ದು, ಕೆರೆಗಳು ಬತ್ತುತ್ತಿವೆ. ಮುಂಗಾರು ಮುನ್ನ ಅಗತ್ಯವಾದ ಬೀಜ ಮತ್ತು ಗೊಬ್ಬರ ಸಂಗ್ರಹದತ್ತ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ತ್ರೈಮಾಸಿಕ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ನಡೆದರೂ ಕೇವಲ ಕಾಟಾಚಾರದ ಸಭೆಗಳಾಗುತ್ತಿವೆ. ಸರ್ಕಾರದ ನಾಯಕರಿಗೆ ಜನಪರ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು.