ಮುಂಬೈ: ಐಪಿಎಲ್ 2026ರ ಅತ್ಯಂತ ಕುತೂಹಲಕಾರಿ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ವಿಜೇತ ಮುಂಬೈ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆಲುವಿನ ಹಾದಿಗೆ ಮರಳಲು ಎರಡೂ ತಂಡಗಳು ಸಜ್ಜಾಗಿವೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿದ್ದರೆ, ಮುಂಬೈ 8ನೇ ಸ್ಥಾನದಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ನಡೆದ 34 ಮುಖಾಮುಖಿಗಳಲ್ಲಿ ಮುಂಬೈ 19 ಪಂದ್ಯ ಗೆದ್ದು ಮೇಲುಗೈ ಸಾಧಿಸಿದೆ. ಆದರೆ, ಇತ್ತೀಚಿನ 5 ಪಂದ್ಯಗಳಲ್ಲಿ ಆರ್‌ಸಿಬಿ 3 ಬಾರಿ ಜಯಗಳಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಬೌಲಿಂಗ್ ವಿಭಾಗದಲ್ಲಿನ ಹಿನ್ನಡೆಯನ್ನು ಸರಿಪಡಿಸಲು ಬೆಂಗಳೂರು ತಂಡವು ಇಂದಿನ ಪಂದ್ಯದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದ ವೇಗಿ ಅಭಿನಂದನ್ ಸಿಂಗ್ ಅವರಿಗೆ ಗೇಟ್‌ಪಾಸ್ ನೀಡಿ, ಅನುಭವಿ ರಾಸಿಖ್ ದಾರ್ ಸಲಾಂ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ವಾಂಖೆಡೆ ಮೈದಾನವು ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದಂತಿದ್ದರೂ, ಸಮುದ್ರದ ತಂಗಾಳಿಯು ವೇಗದ ಬೌಲರ್‌ಗಳಿಗೆ ಆರಂಭಿಕ ನೆರವು ನೀಡಲಿದೆ.























