ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಡವಟ್ಟಾಗಿದ್ದು ವಿದ್ಯಾರ್ಥಿಯೊಬ್ಬನಿಗೆ 100ಕ್ಕೆ 111 ಅಂಕವನ್ನು ನೀಡಿ ಪಾಸ್ ಮಾಡಲಾಗಿದೆ.
ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗೆ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಪರಿಶೀಲನೆ ಮಾಡಿದಾಗ ವೆಬ್‌ಸೈಟ್‌ನಲ್ಲಿ 111 ಅಂಕವನ್ನೇ ತೋರಿಸಿದೆ. ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
600ಕ್ಕೆ 683: ಈ ವಿದ್ಯಾರ್ಥಿಯದ್ದು ಮಾತ್ರ ಅಲ್ಲ ಅನೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಿದೆ. 6 ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕವನ್ನು ನೀಡಲಾಗಿದೆ.
ಓರ್ವ ವಿದ್ಯಾರ್ಥಿಗೆ 600 ಅಂಕಕ್ಕೆ 683 ಅಂಕಗಳನ್ನು ನೀಡಲಾಗಿದೆ. ಅಂಕ ಉತ್ತಮಪಡಿಸಿಕೊಳ್ಳಲು ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ತಪ್ಪಾಗಿದೆ.
ಈ ಪೈಕಿ ಡಿಜಿಲಾಕರ್‌ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೆ ವೆಬ್‌ಸೈಟ್‌ನಲ್ಲಿ ತಪ್ಪಾಗಿದೆ. ಜವಾಬ್ದಾರಿಯುತವಾಗಿ ಫಲಿತಾಂಶ ಪ್ರಕಟಿಸಬೇಕಾದ ಬೋರ್ಡ್ ಈ ರೀತಿಯ ತಪ್ಪು, ತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸಲಾಗಿದೆ.
ಪಿಯು ಮಂಡಳಿ ವಿಷಾದ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಈ ಎಡವಟ್ಟಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ಸಮಸ್ಯೆಯಾಗಿದೆ. ಈಗ ಪರಿಶೀಲನೆ ಮಾಡಲಾಗಿದ್ದು ಸಮಸ್ಯೆ ಸರಿ ಮಾಡಲಾಗುವುದು ಎಂದು ತಿಳಿಸಿದ್ದು, ವೆಬ್‌ಸೈಟ್‌ನಲ್ಲೂ ಸಮಸ್ಯೆ ಆಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಗಾಬರಿಯಾಗುವ ಅಗತ್ಯವಿಲ್ಲ. 50-60 ವಿದ್ಯಾರ್ಥಿಗಳ ಅಂಕದಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ತಾಂತ್ರಿಕ ದೋಷವೇ ಅಥವಾ ನಮ್ಮ ಅಧಿಕಾರಿಗಳ ತಪಪ್ಪಿನಿಂದ ಆಗಿದೆಯಾ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.























