ಕುತೂಹಲ ಕೆರಳಿಸಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಟಾಸ್ ಕೂಡ ವಿಳಂಬವಾಗಿದೆ.
ನಿಗದಿತ ಸಮಯಕ್ಕೆ ಟಾಸ್ ನಡೆಯಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ವರುಣನ ಆರ್ಭಟ ಜೋರಾಗಿದೆ. ಮೈದಾನದ ಸಿಬ್ಬಂದಿ ಪಿಚ್ ಮತ್ತು ಮೈದಾನದ ಬಹುತೇಕ ಭಾಗವನ್ನು ಪ್ಲಾಸ್ಟಿಕ್ ಹೊದಿಕೆಗಳಿಂದ ಸಂರಕ್ಷಿಸಿದ್ದಾರೆ. ಆದರೆ, ಮಳೆ ತೀವ್ರತೆ ಹೆಚ್ಚಾಗಿದ್ದರಿಂದ ಔಟ್‌ಫೀಲ್ಡ್ ಒದ್ದೆಯಾಗಿದೆ.
ಮೈದಾನದ ಬಹುತೇಕ ಭಾಗ ನೀರಿನಿಂದ ಒದ್ದೆಯಾಗಿರುವುದರಿಂದಾಗಿ ಪಂದ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದ್ದು, ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳಲ್ಲೂ ನಿರಾಸೆ ಮೂಡಿದೆ.
ಆರ್‌ಸಿಬಿ ಆಡಿದ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದರೆ, ರಾಜಸ್ಥಾನ ತಂಡ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ಪಂದ್ಯ ರದ್ದಾದರೆ ಸಮಾನ ಅಂಕ: ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡರೆ, ಎರಡೂ ತಂಡಗಳಿಗೂ ಸಮಾನ ಅಂಕಗಳು ಲಭಿಸಲಿವೆ. ಹೀಗಾಗಿ ಉನ್ನುಳಿದ ತಂಡಗಳಿಗೆ ಇದು ಪರಿಣಾಮ ಬೀರಲಿದೆ.
8 ಗಂಟೆಯವರೆ ಓವರ್ ಕಡಿತವಿಲ್ಲ: ಇಂಡಿಯನ್ ಪ್ರೀಮಿಯರ್ ಲೀಗ್ ನಿಯಮದಂತೆ ರಾತ್ರಿ 8 ಗಂಟೆಯವರೆಗೂ ಪಂದ್ಯ ವಿಳಂಬವಾದರೆ ಓವರ್‌ನಲ್ಲಿ ಯಾವುದೇ ಕಡಿತವಿರುವುದಿಲ್ಲ. ಅದಾಗ್ಯೂ ಮಳೆ ಮುಂದುವರಿದರೆ ನಂತರ ಓವರ್‌ನಲ್ಲಿ ಮಾಡಲಾಗುತ್ತದೆ. ರಾತ್ರಿ 10.30ರ ವರೆಗೆ ಐದು ಓವರ್‌ಗಳ ಪಂದ್ಯಕ್ಕೆ ಅವಕಾಶವನ್ನು ನೀಡಲಾಗುತ್ತದೆ.
ಮಳೆ ಬಂದರೆ ಪಿಚ್ ಬೌಲರ್‌ಗಳಿಗೆ ಸಹಕಾರಿ: ಗುವಾಹಟಿಯಲ್ಲಿ ಪಿಚ್ ಸದ್ಯ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಮಳೆ ಬಂದು ಒದ್ದೆಯಾದರೆ ಅದು ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗುವ ಸಾಧ್ಯತೆ ಇದೆ.























