Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ ಉಪಚುನಾವಣೆ: ಮತದಾನ‌ ಫಸ್ಟ್‌ಕ್ಲಾಸ್

ಬಾಗಲಕೋಟೆ ಉಪಚುನಾವಣೆ: ಮತದಾನ‌ ಫಸ್ಟ್‌ಕ್ಲಾಸ್

0
21

ಬಾಗಲಕೋಟೆ: ತೀವ್ರ ಜಿದ್ದಾಜಿದ್ದಿಯ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ಜರುಗಿದ ಉಪಚುನಾವಣೆಯಲ್ಲಿ ಶೇ. 72 ಮತದಾನವಾಗಿದೆ. ಅಲ್ಲಲ್ಲಿ ವಾಗ್ವಾದಗಳು ಜರುಗಿದ್ದು ಬಿಟ್ಟರೆ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ.

ಬೆಳಗ್ಗೆ 7 ಗಂಟೆಯಿಂದಲೇ ಜನ ಮತಗಟ್ಟೆಗಳ ಎದುರು ಸಾಲುಗಟ್ಟಿನಿಂತು ಉತ್ಸಾಹದಿಂದ ಮತದಾನ ಮಾಡಿದರು. ಬೆಳಗ್ಗೆ 9ಕ್ಕೆ ಶೇ. 11.89 ಮತದಾನದ ಮೂಲಕ ಉತ್ತಮ ಮತದಾನದ ಶುಭಸೂಚನೆ ಸಿಕ್ಕಿತು. ಮುಂದೆ ಅದೇ ಏರಗತಿಯ ಟ್ರೆಂಡ್ ಮುಂದವರಿಯಿತು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಅಧಿಕವಾಗಿದ್ದು, ಗ್ರಾಮೀಣ ಭಾಗದಲ್ಲಿ ಸರತಿಸಾಲಿನಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡು ಬಂದಿದ್ದಾರೆ. ಬಾಗಲಕೋಟೆ ನಗರದ ಮತಗಟ್ಟೆ 167ರಲ್ಲಿ ತಂದೆ-ಮಗನ ಮತದಾನವಾಗಿರುವ ಹೆಸರಿಗೆ ಗುರುತು ಹಾಕುವಲ್ಲಿ ಗೊಂದಲವಾಗಿದ್ದರಿಂದ ವಾಗ್ವಾದ ನಡೆಯಿತು. ಹಳೆ ತಾಲೂಕಾ ಪಂಚಾಯಿತಿ ಕಚೇರಿಯ ಮತಗಟ್ಟೆ ಸಂಖ್ಯೆ 112ರಲ್ಲಿ ಬೆಳಗ್ಗೆ 10.35ರಿಂದ 40 ನಿಮಿಷಗಳ ಕಾಲ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ ಮತದಾನ ಸ್ಥಗಿತಗೊಂಡಿತ್ತು.

ಮತಗಟ್ಟೆಯಲ್ಲಿ ಮೊಬೈಲ್ ಬಳಸಬಾರದು, ಮೊಬೈಲ್‌ನೊಂದಿಗೆ ಪ್ರವೇಶಿಸಬಾರದು ಎಂಬ ನಿಯಮವಿದೆ ಆದರೆ ಪೊಲೀಸರು ಮತಗಟ್ಟೆಯ 100 ಮೀಟರ್ ಪ್ರವೇಶಿಸುವಾಗಲೇ ಮೊಬೈಲ್ ತರದಂತೆ ನಿಯಮ ವಿಧಿಸಿದ್ದರಿಂದ ಮತದಾರರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು ಕಂಡು ಬಂದಿತು. ಒಟ್ಟಾರೆ ಮತದಾನ ಶಾಂತಿಯುತವಾಗಿ ಜರುಗಿತು.