ಬೆಳಗಾವಿ, ಹುಕ್ಕೇರಿ, ಅಥಣಿ ಸೇರಿ ಮೂರು ಕಡೆಗಳಲ್ಲಿ ಶೋಧ: ಕೋಟಿ ಕೋಟಿ ಆಸ್ತಿ ಸುಳಿವು
ಬೆಳಗಾವಿ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಬೆನ್ನಲ್ಲೇ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯ ಸಿಂಗ್ ರಜಪೂತ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿಯ ಆಂಜನೇಯ ನಗರದಲ್ಲಿರುವ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ಕೈಗೊಂಡರು.
ಬೆಳಗಾವಿ ಜಿಲ್ಲೆಯಲ್ಲೇ ಈ ದಾಳಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹುಕ್ಕೇರಿ ಹಾಗೂ ಅಥಣಿ ತಾಲೂಕಿನ ಮನೆಗಳ ಮೇಲೂ ಶೋಧ ಕಾರ್ಯ ಮುಂದುವರಿದಿದೆ. ಅಧಿಕಾರಿಗಳ ದಾಳಿಯ ವೇಳೆ ಮನೆಗಳಲ್ಲಿ ಸಂಗ್ರಹವಾಗಿದ್ದ ಆಸ್ತಿ ದಾಖಲೆಗಳು, ಬ್ಯಾಂಕ್ ಠೇವಣಿ ವಿವರಗಳು, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ಬಗ್ಗೆ ತೀವ್ರ ಪರಿಶೀಲನೆ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಈ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರ-ಜಂಗಮ ಆಸ್ತಿ, ಚಿನ್ನಾಭರಣ ಹಾಗೂ ಭಾರೀ ಪ್ರಮಾಣದ ಠೇವಣಿ ಕುರಿತ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿರುವ ಸಾಧ್ಯತೆ ವ್ಯಕ್ತವಾಗಿದೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ಅಕ್ರಮ ಆಸ್ತಿ ಪ್ರಮಾಣದ ನಿಖರ ಚಿತ್ರ ಹೊರಬೀಳಲಿದೆ.
ಡಿಎಸ್ಪಿ ಬಿ.ಎಸ್. ಪಾಟೀಲ ಮತ್ತು ಭರತ್ ರೆಡ್ಡಿ ನೇತೃತ್ವದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ಇನ್ನೂ ಮುಂದುವರಿದಿದೆ. ಅಧಿಕಾರಿಗಳ ದಾಳಿಯಿಂದ ಸಂಬಂಧಿತ ವಲಯಗಳಲ್ಲಿ ತೀವ್ರ ಸಂಚಲನ ಉಂಟಾಗಿದೆ. ಅಕ್ರಮ ಆಸ್ತಿ ಆರೋಪದ ಸುಳಿವು ಆಧರಿಸಿ ನಡೆದ ಈ ಕಾರ್ಯಾಚರಣೆ ಬೆಳಗಾವಿಯಲ್ಲಿ ಮತ್ತೊಮ್ಮೆ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಹೆಜ್ಜೆ ಎಂಬಂತೆ ಪರಿಣಮಿಸಿದೆ.
ಶೋಧ ಕಾರ್ಯದ ಅಂತಿಮ ವರದಿ ಹೊರಬಂದ ನಂತರ ಇನ್ನಷ್ಟು ಸ್ಫೋಟಕ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.





















