Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಅಪಪ್ರಚಾರಕ್ಕೆ ಬೇಸತ್ತು BAMS ವಿದ್ಯಾರ್ಥಿನಿ ಆತ್ಮಹತ್ಯೆ

ಅಪಪ್ರಚಾರಕ್ಕೆ ಬೇಸತ್ತು BAMS ವಿದ್ಯಾರ್ಥಿನಿ ಆತ್ಮಹತ್ಯೆ

0
216

ಡೆತ್ ನೋಟ್‌ನಲ್ಲಿ ಗಂಭೀರ ಆರೋಪ: ಅಧ್ಯಾಪಕ ಸೇರಿ ಹಲವರ ವಿರುದ್ಧ ಕೇಸ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ (Holalkere) ಪಟ್ಟಣದ ಬಸವ ಲೇಔಟ್‌ನಲ್ಲಿ ಬಿಎಎಂಎಸ್ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದುರಂತ ಘಟನೆ ನಡೆದಿದೆ. ನಿಖಿತಾ (23) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.

ಮೃತ ನಿಖಿತಾ ಮಲ್ಲಾಡಿಹಳ್ಳಿಯ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದರು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣಕ್ಕೆ ತೀವ್ರತೆಯನ್ನು ತಂದಿದೆ.

ಡೆತ್ ನೋಟ್‌ನಲ್ಲಿ ಗಂಭೀರ ಆರೋಪ : ಡೆತ್ ನೋಟ್‌ನಲ್ಲಿ ನಿಖಿತಾ ಅವರು ತಮ್ಮ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿದ್ದು, ಅಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲ ವಿದ್ಯಾರ್ಥಿನಿಯರ ವಿರುದ್ಧ ಅಪಪ್ರಚಾರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಅಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ ಎಂಬುದರಿಂದ ಮನನೊಂದು ಈ ತೀರ್ಮಾನಕ್ಕೆ ಬಂದಿದ್ದಾಗಿ ಅವರು ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ಪೊಲೀಸ್ ತನಿಖೆ ಆರಂಭ : ಘಟನೆ ತಿಳಿದ ತಕ್ಷಣ ಹೊಳಲ್ಕೆರೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಡೆತ್ ನೋಟ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಧ್ಯಾಪಕ ರಾಜು, ಅವರ ಪತ್ನಿ ನಿಶಾ ಹಾಗೂ ಕೆಲ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಮುಂದುವರಿದಿದೆ.

ಘಟನೆ ಕುಟುಂಬಸ್ಥರನ್ನು ಶೋಕ ಸಾಗರಕ್ಕೆ ತಳ್ಳಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.