ಧಾರವಾಡ: ತಾಲೂಕಿನ ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸೋಮವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಸಂಗ್ರಹ ಮಾಡಿದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ಗೃಹಿಣಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೂರ್ಣಿಮಾ ಕಲ್ಲಪ್ಪ ಹಾದಿಮನಿ (32) ಎಂಬವರು ಘಟನೆಯಲ್ಲಿ ಶೇ.80ರಷ್ಟು ದೇಹ ಸುಟ್ಟಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಮೊದಲು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೆಟ್ರೋಲ್ ಅಭಾವ ಇದೆ ಎಂಬ ವದಂತಿ ಹಿನ್ನೆಲೆ ಮನೆಯಲ್ಲಿ ಕ್ಯಾನ್‌ನಲ್ಲಿ ಪೆಟ್ರೋಲ್ ಸಂಗ್ರಹಿಸಿ ಫ್ರಿಡ್ಜ್ ಬಳಿ ಇಡಲಾಗಿತ್ತು. ಪೂರ್ಣಿಮಾ ಅಡುಗೆ ಮನೆಯಲ್ಲಿ ಇದ್ದಾಗ ಏಕಾಏಕಿ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡು, ಕ್ಷಣಾರ್ಧದಲ್ಲಿ ಮನೆಗೆ ಬೆಂಕಿ ವ್ಯಾಪಿಸಿದೆ.
ಅಡುಗೆ ಮನೆಯಲ್ಲಿ ಸಿಲುಕಿದ್ದ ಅತ್ತಿಗೆಯನ್ನು ಮೈದುನ ಯಲ್ಲಪ್ಪ ರಕ್ಷಿಸಿದ್ದು, ಈ ವೇಳೆ ಯಲ್ಲಪ್ಪನಿಗೂ ಗಾಯಗಳಾಗಿವೆ. ಮನೆಯ ಇತರೆ ಸದಸ್ಯರು ಹೊರಗಡೆ ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮದುವೆ ಕಾರ್ಯಕ್ರಮಗಳಿಗೆ ರಥ ಓಡಿಸಲು ಪೆಟ್ರೋಲ್ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





















