ಗುವಾಹಟಿ: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಐಪಿಎಲ್ 2026 ಅಭಿಯಾನವನ್ನು ಎಸಿಎ ಕ್ರೀಡಾಂಗಣದಲ್ಲಿ ಆರಂಭಿಸುತ್ತಿದೆ.
ಎರಡೂ ತಂಡಗಳಿಗೆ ಆರಂಭಿಕ ಪಂದ್ಯವಾಗಿರುವುದರ ಹೊರತಾಗಿ, ಈ ಸ್ಪರ್ಧೆಯು ಹೆಚ್ಚುವರಿ ಕುತೂಹಲವನ್ನು ಹೊಂದಿದೆ. ಆರ್‌ಆರ್‌ನ ರವೀಂದ್ರ ಜಡೇಜಾ ತಮ್ಮ ಹಿಂದಿನ ತಂಡದ ವಿರುದ್ಧ ಆಡಲು ಸಿದ್ಧತೆ ನಡೆಸಿಕೊಂಡಿದ್ದರೆ, ಅತ್ತ ರಾಜಸ್ಥಾನ ತಂಡದ ಮಾಜಿ ನಾಯಕ ಸಂಜು ಸ್ಯಾಮ್ಸನ್ ಈಗ ತಮ್ಮವರೆದುರೇ ಮೊದಲ ಬಾರಿಗೆ ಎದುರುಗೊಳ್ಳುತ್ತಿದ್ದಾರೆ.
ಮತ್ತೊಂದು ದೊಡ್ಡ ವಿಚಾರವೆಂದ್ರೆ, ಆರ್‌ಆರ್‌ನ ಪೂರ್ಣ ಸಮಯದ ನಾಯಕನಾಗಿ ರಿಯಾನ್ ಪರಾಗ್ ಅವರ ಮೊದಲ ಪಂದ್ಯವೂ ಇದಾಗಿದೆ. ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡಾಗ ರಿಯಾನ್ ಪರಾಗ್ ಅವರು ಸ್ಟ್ಯಾಂಡ್-ಇನ್ ನಾಯಕರಾಗಿ ಆಯ್ಕೆಯಾಗಿದ್ದರು.
ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿ ಬಲ ತುಂಬಲಿದ್ದಾರೆ. ವೈಭವ್ ಸೂರ್ಯವಂಶಿ ಸ್ಫೋಟಕ ಪ್ರದರ್ಶನ ನೀಡುತ್ತಾರೆ. ಹಾಗಾಗಿ, ಇಂದು ಈ ಜೋಡಿಯ ಮೇಲೆಯೇ ಎಲ್ಲರ ಕಣ್ಣಿದೆ. ಕಳೆದ ಸೀಸನ್‌ನಲ್ಲಿ ಎಡವಿದ್ದ ಮಧ್ಯಮ ಕ್ರಮಾಂಕವು ಶಿಮ್ರಾನ್ ಹೆಟ್ಮೈಯರ್ ಮತ್ತು ಧ್ರುವ್ ಜುರೆಲ್ ಅವರನ್ನು ಅವಲಂಬಿಸಿದೆ, ಈಗ ಸಾಲದೆಂಬಂತೆ ರವೀಂದ್ರ ಜಡೇಜಾ ಬಲಪಡಿಸಿದ್ದಾರೆ.
ಚೆನ್ನೈ ಕೂಡ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದ್ದು, ತನ್ನ ಹನ್ನೊಂದರ ಬಳಗದಲ್ಲಿ ಯುವಕರನ್ನು ತುಂಬಿದೆ. ಆಯುಷ್ ಮ್ಹಾತ್ರೆ ಹೊಸ ಶಕ್ತಿ ತಂದಿದ್ದರೂ, ಮತ್ತೋರ್ವ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಸದ್ಯಕ್ಕೆ ಅಲಭ್ಯರಾಗಿರುವುದೇ ಕೊಂಚ ಹಿನ್ನಡೆ ತಂದಿದೆ.























